ಹಿಂದಿನ ಪತ್ರಿಕಾ ಪ್ರಕಟಣೆಗಳು: 10/04/2020: https://gramsevasangh.org/2020/04/24/pressrelease10042020kan-2/ 08/04/2020: https://gramsevasangh.org/2020/04/09/pressnote08042020kan/
ಪತ್ರಿಕಾ ಬಿಡುಗಡೆ – 17.04.2020
ಎಂಟು ದಿನಗಳ ನಂತರ ನಾನು, ಇಂದು ಸಂಜೆ, 17 ಏಪ್ರಿಲ್ 2020, ಉಪವಾಸ ವ್ರತವನ್ನು ಕೊನೆಗೊಳಿಸುತ್ತಿದ್ದೇನೆ. ಒಂದು ಸೀಮಿತ ಉದ್ದೇಶದಿಂದ ವ್ರತವನ್ನು ಕೈಗೊಳ್ಳಲಾಗಿತ್ತು. ಪ್ರಭುತ್ವವನ್ನು ಅಲುಗಾಡಿಸುವುದಾಗಿರಲಿಲ್ಲ ಉದ್ದೇಶ. ಆತ್ಮವಲೋಕನವಾಗಿತ್ತು. ನಾನೂ ಮೊದಲ್ಗೊಂಡು ಹಲವು ಗಾಂಧಿವಾದಿಗಳು ರಚನಾತ್ಮಕ ಕಾರ್ಯಕರ್ತರು ಹಾಗೂ ಪ್ರಗತಿಪರ ಚಿಂತಕರು ಈ ಕೆಲವು ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದೇವೆ ಹಾಗೂ ನಾವೊಂದು ದೃಢನಿರ್ಧಾರಕ್ಕೆ ಬಂದಿದ್ದೇವೆ. ಲಾಕ್‍ಡೌನ್ ತೆರವುಗೊಂಡ ನಂತರದಲ್ಲಿ ಬೀದಿಗಿಳಿಯಲಿದ್ದೇವೆ, ಹಸಿದವರತ್ತ, ಕೆಲಸ ಕಳೆದುಕೊಂಡಿರುವವರತ್ತ ತೆರಳಲಿದ್ದೇವೆ. ಗುಳೆಎದ್ದ ಬಡವರಿರಲಿ, ಗ್ರಾಮೀಣ ರೈತನಿರಲಿ, ಪೇಟೆಯ ಕಾರ್ಮಿಕನಿರಲಿ, ನೇಕಾರ ಚಮ್ಮಾರ ಯಾರೇ ಇರಲಿ ಅವರ ಪರವಾದ ದನಿ ಎತ್ತುವವರಿದ್ದೇವೆ. ನಾವು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಬಡವರ ಪರವಾದ ಹೋರಾಟಗಳನ್ನು ಹೆಚ್ಚಿನ ದೃಡತೆಯಿಂದ ಮುನ್ನಡೆಸುವವರಿದ್ದೇವೆ.
ಜೊತೆಗೆ ಮತ್ತೊಂದು ಕಾರ್ಯವನ್ನೂ ಮಾಡಲಿದ್ದೇವೆ. ಮಹತ್ತರವಾದ ಕಾರ್ಯವದು. ಕುಸಿದು ಬಿದ್ದಿರುವ ರಾಕ್ಷಸ ಆರ್ಥಿಕತೆಯನ್ನು ಗೂಟಕೊಟ್ಟು ನಿಲ್ಲಿಸುವ ಪ್ರಯತ್ನಗಳು ನಡೆಯಲಿವೆ. ಬಡವರು ಹಾಗೂ ಪ್ರಕೃತಿಯ ಮೇಲೆ ಇಷ್ಟೆಲ್ಲ ದೌರ್ಜನ್ಯ ಎಸಗಿ ನರಕ ಸೃಷ್ಟಿಸಿದ ರಾಕ್ಷಸನನ್ನು ಮತ್ತೆ ಜೀವಂತವಾಗಿಸುವ ಪ್ರಯತ್ನ ಮಾಡಲಿದ್ದಾರೆ ದುರಾಸೆಗೆ ಬಿದ್ದವರು. ನಾವವರನ್ನು ತಡೆಯುವವರಿದ್ದೇವೆ. ಪ್ರಭುತ್ವವಾಗಲಿ ಉದ್ಯಮಿಗಳಾಗಲಿ ವಲ್ರ್ಡ್ ಬ್ಯಾಂಕ್ ಆಗಲಿ ಅಮೇರಿಕೆಯಾಗಲಿ ಯಾರೇ ಆಗಲಿ, ದುರಾಸೆಯ ಪ್ರಯತ್ನ ನಡೆಸಿದರೆ ಅವರ ವಿರುದ್ಧ ಅಹಿಂಸಾತ್ಮಕ ಯುದ್ಧ ಸಾರುವವರಿದ್ದೇವೆ.
ಉಪವಾಸವ್ರತದ ಸಂದರ್ಭದಲ್ಲಿ ನೀವೆಲ್ಲ ನೈತಿಕ ಬೆಂಬಲ ನೀಡಿ ಸಹಕರಿಸಿದ್ದೀರಿ. ಪೋಲೀಸರು ಸೌಜನ್ಯದಿಂದ ನಡೆದುಕೊಂಡಿದ್ದಾರೆ. ಇಂದಿನ ಸಂಕಟದ ಪರಿಸ್ಥಿತಿಯಲ್ಲಿ ಸಂಯಮ ಅಗತ್ಯವಾದ್ದರಿಂದ ಮಾಧ್ಯಮಗಳು ಸಂಯಮದಿಂದ ಸುದ್ಧಿ ಪ್ರಕಟಿಸಿವೆ. ಇವರೆಲ್ಲರಿಗೂ ನಾವು ಚಿರಋಣಿಯಾಗಿದ್ದೇವೆ.
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಬಳಸಿ bit.ly/karonakuch_presskit
-ಪ್ರಸನ್ನ
ರಂಗಕರ್ಮಿ ಮತ್ತು ನಾಟಕಕಾರ,
ಗ್ರಾಮಸೇವಾಸಂಘ