ಭೂ ಹರಣದ ವಿರುದ್ಧ ಗ್ರಾಮಸ್ಥರೇ ಸಿಡಿದೇಳಬೇಕು

‘ಭೂಸುಧಾರಣಾ ಕಾಯ್ದೆಗೆ ಸರ್ಕಾರ ತಿದ್ದುಪಡಿ ಮಾಡಿ, ಯಾರು ಬೇಕಾದರೂ ಕೃಷಿ ಭೂಮಿ ಕೊಳ್ಳಬಹುದು ಎಂದಾಗಿಬಿಟ್ಟರೆ ಪರಿಸ್ಥಿತಿ ಊಹಿಸಕ್ಕೇ ಸಾಧ್ಯವಿಲ್ಲ. ಯಾವೋನಾದರೂ ಬಂಡವಾಳಗಾರ ಬಂದು ನಮ್ಮ ಭೂಮಿಗೆ ಒಂದಕ್ಕೆರಡು ಬೆಲೆ ಕಟ್ಟಿಬಿಟ್ಟರೆ ನಮ್ಮ ಸುತ್ತಮುತ್ತ ಅನೇಕ ರೈತರು ಭೂಮಿ ಮಾರಿ ಬಿಡುತ್ತಾರೆ. ಆಗ ಮಧ್ಯದಲ್ಲಿ ಸೇರಿಕೊಂಡ ನಾನೂ ಮಾರಾಟ ಮಾಡದೆ ಬೇರೆ ದಾರಿಯೇ ಇರುವುದಿಲ್ಲ’. ಮೈಸೂರು ಭಾಗದ ರಾಷ್ಟ್ರ ಪ್ರಶಸ್ತಿ ವಿಜೇತ ಸಾವಯವ ಕೃಷಿಕರೊಬ್ಬರು ಬಹಳ ನೋವಿನಿಂದ ಹೇಳಿದ ಮಾತಿದು. ಅವರ ಕುಟುಂಬ ಎಷ್ಟೋ ತಲೆಮಾರುಗಳಿಂದ ಅಲ್ಲಿ ಬೇಸಾಯ ಮಾಡುತ್ತಾ ಬಂದಿದೆ. ಭೂಮಿ ಮಾರಾಟ ಮಾಡುವ ಒತ್ತಡಕ್ಕೆ ಸಿಲುಕುವ ರೈತರ ಅಸಹಾಯಕತೆ, ಅವರು ಒಳಗಾಗುವ ಆಘಾತ ಊಹಿಸಲಸಾಧ್ಯ. ಈಗ ಯಾರು ಬೇಕಾದರೂ ಏಕ್‍ದಂ 216 ಎಕರೆ ಭೂಮಿ ಸರಾಗವಾಗಿ ಕೊಂಡುಬಿಡಬಹುದು ಎನ್ನುವ ವಿಚಾರ ರೈತರಲ್ಲಿ ನಿಜಕ್ಕೂ ದಿಗಿಲು ಹುಟ್ಟಿಸುತ್ತಿದೆ.

ಕೃಷಿಯಲ್ಲಿ ಎಲ್ಲವೂ ಸರಿಯಾಗಿದ್ದಿದ್ದರೆ, ಕೃಷಿಯನ್ನು ನೆಚ್ಚಿ ಬದುಕಬಹುದೆನ್ನುವ ಭರವಸೆಯನ್ನು ಮೂಡಿಸಿದ್ದರೆ ಯಾವ ರೈತರೂ ಜಮೀನು ಮಾರಾಟ ಮಾಡುವ ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ. ಆದರೆ, ಕೃಷಿ ಲಾಭದಾಂiುಕವಲ್ಲ; ಅದರಲ್ಲೂ ಮಳೆಯಾಶ್ರಿತ ಜಮೀನುಗಳು, ಸಣ್ಣ ಹಿಡುವಳಿಗಳು ಆದಾಯ ತರಲಾರವು; ಇಂತಹ ರೈತರು ಕೃಷಿಯನ್ನು ಬಿಡಬೇಕು ಎಂದು ದಶಕಕ್ಕೂ ಹೆಚ್ಚು ಕಾಲದಿಂದ ರೈತರ ಮೇಲೆ ತೀವ್ರ ಒತ್ತಡ ತರಲಾಗುತ್ತಿದೆ. ಸರ್ಕಾರಗಳು, ರಾಜಕಾರಣಿಗಳು, ಅಧ್ಯಯನ ಸಂಸ್ಥೆಗಳು, ವಿದ್ವಾಂಸರು ಎಲ್ಲರೂ ಇದನ್ನೇ ಹೇಳುತ್ತಾ ಬರುತ್ತಿದ್ದಾರೆ. ಇಲ್ಲಿ ರೈತರನ್ನು ರಕ್ಷಿಸಬೇಕಾಗಿದ್ದ ಕೃಷಿ ವಿಶ್ವವಿದ್ಯಾಲಯಗಳು, ಸಂಬಂಧಪಟ್ಟ ಇಲಾಖೆಗಳು ರೈತರಿಂದ ಸಂಪೂರ್ಣ ಬೇರ್ಪಟ್ಟು ತಮ್ಮ ಪಾಡಿಗೆ ಹಾಯಾಗಿವೆ. ಇವರು ರೈತರೊಡನೆ ಸಹಪಾಠಿಗಳಾಗಿ ಬೆರೆತು, ಪರಿಸರದೊಂದಿಗೆ ಕೆಲಸ ಮಾಡಿದ್ದರೆ ಇಂದು ಕೃಷಿ ಲೋಕದ ಸ್ವರೂಪವೇ ಬೇರೆಯಾಗಿರುತ್ತಿತ್ತು. ಆಳುವ ವರ್ಗದ ಎಲ್ಲಾ ಅಂಗಗಳೂ ಸೇರಿಕೊಂಡು ಕೃಷಿ ಕ್ಷೇತ್ರವನ್ನು ಅಧೋಗತಿಗೆ ತಳ್ಳಿ ಈಗ, ‘ನಿಮಗೆ ಕೃಷಿ ಲಾಭದಾಯಕವಲ್ಲ, ನೀವು ಜಮೀನು ಮಾರಿಕೊಳ್ಳಿ, ಅದಕ್ಕಾಗಿ ಹೆಚ್ಚು ದುಡ್ಡು ಕೊಡುವವರನ್ನು ಕರೆತರುತ್ತಿದ್ದೇವೆ’ ಎನ್ನುತ್ತಿದ್ದಾರೆ. ಇದಕ್ಕೂ ಮೊದಲು ‘ಮಾದರಿ ಗುತ್ತಿಗೆ ಕಾಯಿದೆ- 2016ನ್ನು ತಂದು, ‘ರೈತರು ಬೇಸಾಯ ಮಾಡದೆ ಪಾಳು ಬಿಟ್ಟಿರುವ ಭೂಮಿಯನ್ನು ಗುತ್ತಿಗೆ ಕೊಡಿ’ ಎಂದು ಬೆದರಿಸಿದ ಸರ್ಕಾರ, ಈಗ ಅದನ್ನು ಮಾರಾಟ ಮಾಡಿ ಎನ್ನುತ್ತಿದೆ.

ಭೂ ಸುಧಾರಣಾ ಕಾಯಿದೆ ಎನ್ನುವುದು ಕರ್ನಾಟಕಕ್ಕೆ, ಒಂದು ಹೆಮ್ಮೆಯ ಕಿರೀಟವಿದ್ದಂತೆ. ‘ಉಳುವವನೇ ಭೂಮಿ ಒಡೆಯ’, ‘ರೈತರಲ್ಲದವರು ಕೃಷಿ ಭೂಮಿ ಖರೀದಿಸುವ ಹಾಗಿಲ್ಲ’ ಎಂಬೆರಡು ಅಂಶಗಳು ಸಣ್ಣ-ಸಾಮಾನ್ಯ ರೈತರಿಗೆ ಶ್ರೀರಕ್ಷೆಯಿದ್ದಂತೆ. ರೈತರ ಸುದೀರ್ಘ ಹೋರಾಟ, ತ್ಯಾಗಗಳ ಫಲ ಇದು. ಅದನ್ನು ಒಂದೇ ಬೀಸಿಗೆ ನೆಲಸಮಮಾಡಿಬಿಡುವುದೆಂದರೆ!. ಈ ಪ್ರಕ್ರಿಯೆ ಇವತ್ತಿನದಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಎಲ್ಲಾ ರಾಜಕೀಯ ಪಕ್ಷಗಳು ವಿಚಾರದಲ್ಲಿ ಹಸ್ತಕ್ಷೇಪ ಮಾಡಿವೆ. ಮಾನ್ಯ ದೇವೇಗೌಡರು ಮುಖ್ಯಮಂತ್ರಿಗಳಿದ್ದಾಗ, 1995ರಲ್ಲಿ ತಂದ ‘ಹೊಸ ಕೃಷಿ ನೀತಿ’ ಯಲ್ಲಿಯೇ ಕೃಷಿಕರಲ್ಲದವರಿಗೆ ಕೃಷಿ ಭೂಮಿ ಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಅದನ್ನು ಪುಷ್ಪ ಕೃಷಿ, ಅಕ್ವಾಕಲ್ಚರ್ (ಜಲಚರ ಸಾಕಣೆ)ಗಳಿಗೆ ಮಿತಿಗೊಳಿಸಲಾಗಿತ್ತು. ಆಗ ಬೆಂಗಳೂರಿನ ಆಸುಪಾಸಿನಲ್ಲಿ ಹೂಬೇಸಾಯದ ಹೆಸರಲ್ಲಿ ಕೃಷಿ ಭೂಮಿಗಳು ಬಿಕರಿಯಾದ ರೀತಿ ದಿಗಿಲು ಹುಟ್ಟಿಸುವಂತಿತ್ತು. ಆಗ ಬಂಡವಾಳಿಗರು ಕೊಂಡ ಜಮೀನುಗಳು ಈಗ ಲೇ-ಔಟ್‍ಗಳಾಗಿ ಬೆಂಗಳೂರಿನ ‘ಹಿರಿಮೆ’ಯ ಗರಿಗಳಾಗಿವೆ. ಕೃಷಿ ಭೂಮಿ ಕೊಳ್ಳಲು ಇದ್ದ ಆದಾಯ ಮಿತಿಯನ್ನು ಎರಡು ಲಕ್ಷಕ್ಕೆ ಗೊತ್ತುಪಡಿಸಿದ್ದೂ ಆಗಲೇ.

ಮುಂದೆ 2014ರಲ್ಲಿ ಮಾನ್ಯ ಸಿದ್ಧರಾಮಯ್ಯನವರ ಸರ್ಕಾರ, ಕೃಷಿ ಭೂಮಿ ಕೊಳ್ಳಲು ಇದ್ದ ಆದಾಯ ಮಿತಿಯನ್ನು ಎರಡು ಲಕ್ಷದಿಂದ ಇಪ್ಪತ್ತೈದು ಲಕ್ಷಕ್ಕೆ ಏರಿಸಿತು. ಅದರ ಒಂದು ಫಲಶ್ರುತಿಯೆಂದರೆ, ಸೋಲಾರ್ ಫಲಕಗಳನ್ನು ಹಾಕುವ ನೆಪದಲ್ಲಿ ರೈತರ ಜಮೀನನ್ನು ವ್ಯಾಪಕವಾಗಿ ಕಬಳಿಸುವ ಪ್ರಕ್ರಿಯೆ ಪ್ರಾರಂಭವಾದದ್ದು. ಇಪ್ಪತ್ತೈದು ವರ್ಷಗಳಷ್ಟು ದೀರ್ಘ ಕಾಲಿಕ ಗುತ್ತಿಗೆಗೆ ರೈತರ ಜಮೀನುಗಳನ್ನು ಪಡೆಯಲು ಬಂಡವಾಳಿಗರಿಗೆ ಅನುವು ಮಾಡಿಕೊಡಲಾಯಿತು. ರೈತರ ಮೇಲೆ ಇನ್ನಿಲ್ಲದ ಒತ್ತಡ ತಂದು ಇವರು ವಶಪಡಿಸಿಕೊಂಡಿರುವ ಈ ಜಮೀನುಗಳು ಇನ್ಯಾವತ್ತೂ ರೈತರ ಕೈಸೇರುವ ಪ್ರಶ್ನೆಯೇ ಇಲ್ಲ.

ಇದೀಗ ಕೋವಿಡ್ ಲಾಕ್ಡೌನ್‍ನಿಂದ ತತ್ತರಿಸಿಹೋಗಿ ಇನ್ನೂ ಬಿತ್ತನೆ ಮಳೆಗಳಿಗೆ ಕಾಯುತ್ತಾ ಸೋತ ಸ್ಥಿತಿಯಲ್ಲಿ ರೈತರಿರುವಾಗ ಅವರಿಗೆ ಸಾ ್ವಂತನ ತರುವ ಯಾವುದೇ ಕಾರ್ಯಗಳಿಗೆ ಮುಂದಾಗದೆ ಭೂಮಿ ಮಾರಾಟ ಮಾಡುವ ಈ ಆಮಿಷ! ‘ಕೃಷಿ ಮಾಡಲಾರದ ಅತಂತ್ರ ಸ್ಥಿತಿಯಲ್ಲಿರುವ ರೈತರು, ಕೃಷಿಯನ್ನು ಲಾಭದಾಯಕವಾಗಿ ಮಾಡುವ ಆಕಾಂಕ್ಷೆ ಹೊಂದಿgುವ ಆಸಕ್ತರಿಗೆ ಮಾರಾಟ ಮಾಡುವುದಕ್ಕೆ ಇದು ಅವಕಾಶ. ಕೃಷಿ ಭೂಮಿ ಹಸಿರು ವಲಯದಲ್ಲಿ ಬರುವುದರಿಂದ ಬೇರೆ ಉದ್ಯಮಗಳಿಗೆ ಅದನ್ನು ಬಳಸುವ ಪ್ರಶ್ನೆಯೇ ಇಲ್ಲ, ಕೃಷಿ ಚಟುವಟಿಕೆ ಬಿಟ್ಟರೆ ಬೇರೆ ಏನೂ ಮಾಡಲು ಸಾದ್ಯವಿಲ್ಲ’ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ತಮಾಷೆಯೆಂದರೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ)ದ ಅಧ್ಯಕ್ಷರು, ‘ನಾವು ಭೂಮಿ ಖರೀದಿಸಲು ಕೆಎಸ್‍ಐಡಿಸಿ, ಕೆಐಎಡಿಬಿಎಗಳಿಗೆ ಅಲದಾಡಬೇಕಾಗುತ್ತಿತ್ತು. ನಾವೇ ಖರೀದಿಸಿ ನಮ್ಮ ಸದಸ್ಯರಿಗೆ ಹಂಚುವುದರಿಂದ ಸಮಯ, ಶ್ರಮ ಉಳಿಯುತ್ತದೆ. ಈ ಬಗ್ಗೆ ನಾವು ಪ್ರಸ್ತಾಪ ಸಲ್ಲಿಸಿದ್ದೆವು. ಸರ್ಕಾರ ಅದಕ್ಕೆ ಸ್ಪಂದಿಸಿದೆ. ಇದರಿಂದ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ’. ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಈ ಮಟ್ಟಕ್ಕೆ ಸರ್ಕಾರ ತನ್ನ ಜನತೆಯ ಕಣ್ಣಿಗೆ ಮಣ್ಣೆರೆಚುವುದೆಂದರೆ!

‘ನಿರುದ್ಯೋಗಿ ಕೃಷಿ ಪದವೀಧರರು ಹಳ್ಳಿಗಳಿಗೆ ಹಿಂದಿರುಗಿ ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು ಇದು ಅವಕಾಶ ಒದಗಿಸುತ್ತದೆ’ ಎನ್ನುವುದು ಕಂದಾಯ ಸಚಿವರ ಇನ್ನೊಂದು ಕಣ್ಕಟ್ಟಿನ ಹೇಳಿಕೆ. ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಗಾಗಿಯೇ ಕೆಐಎಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಇದೆಯಲ್ಲ. ಇದುವರೆಗೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಬಹುಭಾಗ ಬಳಕೆಯಾಗದೆ ಉಳಿದಿರುವ ಬಗ್ಗೆ ಎಲ್ಲಾ ಸರ್ಕಾರಗಳೂ ಆಗಾಗ್ಗೆ ಹೇಳಿಕೊಂಡೇ ಬಂದಿವೆ. ಆದರೆ ಈ ಭೂಮಿಯನ್ನು ಬಳಸಬೇಕೆಂದರೆ ಅದಕ್ಕೆ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ನೆಲೆ ಕಾಯಿದೆ-2013ರ’ ಕಟ್ಟುನಿಟ್ಟಿನ ಕಟ್ಟಳೆಗಳಿಗೆ ಒಳಗಾಗಬೇಕು. ಕೈಗಾರಿಕೆಯ ಸಾಮಾಜಿಕ ಮತ್ತು ಪಾರಿಸಾರಿಕ ದುಷ್ಪರಿಣಾಮದ ಅಂದಾಜು ಮಾಡಬೇಕು. ಇದರ ಬದಲು ನೇರವಾಗಿ ಭೂಮಿ ಕೊಂಡುಬಿಟ್ಟರೆ ಯಾರ ಮರ್ಜಿಯೂ ಇರುವುದಿಲ್ಲ ಎನ್ನುವುದು ಇಲ್ಲಿನ ಹುನ್ನಾರ. ಅಷ್ಟಾಕ್ಕೂ ಕೃಷಿಯಲ್ಲಿ ಅತೀವ ಆಸಕ್ತಿ ಇರುವವರಿಗೆ, ಈಗಾಗಲೇ ರೈತರು ಪಾಳು ಬಿಟ್ಟಿದ್ದಾರೆ ಎನ್ನಲಾದ 22 ಲಕ್ಷ ಹೆಕ್ಟೇರ್ ಬೇಸಾಯ ಭೂಮಿಯನ್ನು ದೀರ್ಘ ಕಾಲಿಕ ಗುತ್ತಿಗೆಗೆ ಕೊಡುವ ಬಗ್ಗೆ ಯೋಚಿಸಬಹುದಲ್ಲ.


ಇಲ್ಲಿ ಇನ್ನೂ ಒಂದು ಮುಖ್ಯ ವಿಚಾರವಿದೆ. ಭೂಸುಧಾರಣಾ ಕಾಯಿದೆಯಡಿ ರೈತರಲ್ಲದವರು ಭೂಮಿ ಖರೀದಿಸಲು ಅವಕಾಶವಿಲ್ಲದೆ ಹೋಗಿದ್ದರೂ, ಐವತ್ತು ಲಕ್ಷ ಎಕರೆ ಭೂಮಿ ರೈತರ ಕೈತಪ್ಪಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿದೆ. ಜಮೀನು ಖರೀದಿಯಲ್ಲಿ ಭೂ ಸುಧಾರಣಾ ಕಾಯ್ದೆ 79ಎ ಮತ್ತು 79 ಬಿ ಕಲಂನ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಸುಮಾರು 83,171 ಪ್ರಕರಣಗಳನ್ನು ದಾಖಲಿಸಿತ್ತು. ಅದರಲ್ಲಿ ಇತ್ಯರ್ಥ ಆಗದಿರುವ 12,231 ಪ್ರಕರಣಗಳಿವೆ. ಬೆಂಗಳೂರಿನ ಸುತ್ತಮುತ್ತಲೇ ‘ಕರ್ನಾಟಕ ರಾಜ್ಯ ವಸತಿ ಮಹಾಮಂಡಲಿ’ ಸೇರಿದಂತೆ ವಿವಿಧ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳು ಭೂ ಸುಧಾರಣಾ ಕಾಯ್ದೆಯ 79ಎ ಮತ್ತು 79 ಬಿ ಕಲಂ ಉಲ್ಲಂಘಿಸಿ ಸುಮಾರು ಹತ್ತು ಸಾವಿರ ಕೋಟಿ ರೂ ಬೆಲೆಯ 5,027 ಎಕರೆ ಕೃಷಿ ಭೂಮಿಯನ್ನು ಮಧ್ಯವರ್ತಿಗಳ ಮೂಲಕ ಎಕರೆಗೆ ಒಂದೂವರೆ-ಎರಡು ಕೋಟಿ ಕೊಟ್ಟು ಖರೀದಿಸಿರುವುದು ಬಹಿರಂಗವಾಗಿದೆ. ಪ್ರತಿ ಹಂತದಲ್ಲೂ ಇವು ಸರ್ಕಾರವನ್ನು ವಂಚಿಸಿವೆ. ಇದಕ್ಕೆ ಹಿಂದಿನ ಯಾವ ಸರ್ಕಾರಗಳು ಕ್ರಮ ಕೈಗೊಂಡಿಲ್ಲ. ಇಂತಹ 17,574 ಪ್ರಕರಣಗಳು ದಾಖಲಾಗಿದ್ದರೆ, 5,490 ಪ್ರಕರಣಗಳಲ್ಲಿ ಕಾಯಿದೆ ಉಲ್ಲಂಘನೆ ಆಗಿರುವುದು ದೃಢಪಟ್ಟಿದೆ. ಈ ಎಲ್ಲಾ ಇತ್ಯರ್ಥವಾಗದ ಪ್ರಕರಣಗಳನ್ನೆಲ್ಲಾ ನ್ಯಾಯ ಸಮ್ಮತಗೊಳಿಸಿಬಿಡುವ ದುರುದ್ದೇಶ ಈ ತಿದ್ದುಪಡಿಗಳ ಹಿಂದೆ ಬಲವಾಗಿ ಕೆಲಸ ಮಾಡಿದೆ.


ರೈತರಿಗೆ ಭೂಮಿ ಎನ್ನುವುದು ಆಸ್ತಿಗಿಂತ ಹೆಚ್ಚಾಗಿ ಸುರಕ್ಷತಾ ಭಾವ ತಂದುಕೊಡುತ್ತದೆ. ಜೀವಮಾನವಿಡೀ ದುಡಿದು ನಾಲ್ಕಾರು ಎಕರೆ ಜಮೀನು ಕೊಂಡುಬಿಟ್ಟಾಗ ರೈತರಿಗಾಗುವ ಸಂತೋಷ, ಸಂಭ್ರಮ, ಸುರಕ್ಷತಾ ಭಾವ ವರ್ಣಿಸಲಸಾಧ್ಯ. ಅಂಥದ್ದರಲ್ಲಿ ಏಕಾಏಕಿ ಬಂಡವಾಳಿಗನೊಬ್ಬ ಕಣ್ಣೆದುರೇ ನೂರಾರು ಎಕರೆ ಜಮೀನನ್ನು ಆಕ್ರಮಿಸುತ್ತಾರೆಂದರೆ ಹೇಗಾಗಬೇಡ! ಹಾಗಾಗಕೂಡದು ಎಂದರೆ, ಪ್ರತಿಯೊಂದು ಗ್ರಾಮದ ರೈತರೂ, ಈ ಊರಿನ ಜಮೀನು ನಮ್ಮ ರೈತರಿಗೆ ಸೇರಿದ್ದು, ಅದನ್ನು ಬಂಡವಾಳಿಗರಿಗೆ ಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಘೋಷಿಸಬೇಕು. ಪ್ರತಿ ಗ್ರಾಮದ ಪ್ರವೇಶದಲ್ಲೇ, ‘ರೈತರ ಭೂಮಿ ಕಬಳಿಸುವವರಿಗೆ ಪ್ರವೇಶವಿಲ್ಲ’ ಎಂದು ಫಲಕ ಹಾಕಿ, ಕಣ್ಗಾವಲಾಗಿದ್ದು, ಅತಿಕ್ರಮಣಕಾರರಿಗೆ ಬಹಿಷ್ಕಾರ ಹಾಕಬೇಕು. ಭೂ ಕಬಳಿಕೆಯ ವಿರುದ್ಧ ಗ್ರಾಮಸ್ಥರ ಕಾರ್ಯಪಡೆ ಸಿದ್ಧವಾಗಬೇಕು. ಅದಕ್ಕಾಗಿ ನಾವು ನೀವೆಲ್ಲಾ ಸನ್ನದ್ಧರಾಗೋಣ.

  • ವಿ. ಗಾಯತ್ರಿ, ಸಂಪಾದಕಿ, ‘ಸಹಜ ಸಾಗುವಳಿ’ ದ್ವೈಮಾಸಿಕ ಪತ್ರಿಕೆ