ಹಣ ಉಳ್ಳವರಿಗೆ ಭೂಮಿ, ಒಂದು ವಿವೇಚನಾರಹಿತ ತಿದ್ದುಪಡಿ – ಜಯದೇವ.ಜಿ.ಎಸ್

ಹಣಬಲ ಇದ್ದವರೆಲ್ಲ ವ್ಯವಸಾಯದ ಭೂಮಿಕೊಂಡು ಕೊಳ್ಳಬಹುದೆಂಬ ಕಾನೂನು ತಿದ್ದುಪಡಿಒಂದು ವೇಳೆ ಊರ್ಜಿತವಾದರೆ ವಿನಾಶಕಾರಿಯಾದೀತು. ರಾಗಿ-ಜೋಳ ಬೆಳೆಗಳು ಕಡುಲೋಭಿ ವ್ಯಾಪಾರಿಗಳ ದೃಷ್ಟಿಯಲ್ಲಿ ಲಾಭದಾಯಕವಲ್ಲ. ಆದರೆ ಇದು ಕೋಂಟ್ಯಾಂತರ ಜನಗಳ ಪ್ರಮುಖ ಆಹಾರ ಎಂಬುದನ್ನು ಮರೆಯುವಂತಿಲ್ಲ.

ವ್ಯವಸಾಯದ ಒಲವಿಲ್ಲದ, ಹಣವನ್ನು ಮಾತ್ರ ಪ್ರೀತಿಸುವ ಶ್ರೀಮಂತರ ಕೈಗೆ ಬಡವರ ಭೂಮಿ ಸಿಕ್ಕರೆ ಅದರ ಪರಿಣಾಮಗಳೇನು?

ಈ ಕಾನೂನು ತಿದ್ದುಪಡಿ ಸೂಚಿಸುತ್ತಿರುವವರಿಗೆ ಇದರ ದೂರಗಾಮಿ ಪರಿಣಾಮಗಳನ್ನು ಊಹಿಸಲು ಸಾಧ್ಯವಾಗುತ್ತಿದೆಯೆ?

ತತ್ಕಾಲಕ್ಕೆ ಈ ತಿದ್ದುಪಡಿ ಸರ್ಕಾರಕ್ಕೆ ಹಣಒದಗಿಸಬಹುದು. ಆದರೆ ದಶಕಗಳ ತರುವಾಯ ನಮ್ಮ ನಾಡಿನ ವ್ಯವಸಾಯಿಚಿತ್ರಣ ಹೇಗಿರುತ್ತದೆ?

ಕೃಷಿ ಸಂಸ್ಕೃತಿಯನಾಶ, ವೈವಿಧ್ಯಮಯ ಆಹಾರಬೆಳೆಗಳ ನಾಶ ಜೊತೆಗೆ ಈ ಸಸ್ಯಗಳಲ್ಲಿರುವ, ಸಸ್ಯಗಳ ರೋಗನಿರೋಧಕ ಶಕ್ತಿಗೆ ಕಾರಣವಾದ ಜೀನ್‍ಗಳ ನಾಶ. ಅಲ್ಲದೆನಮ್ಮರೈತರ ನಡುವೆ ಇನ್ನೂ ಜೀವಂತವಾಗಿರುವ ಸ್ಥಳೀಯ ತಳಿಗಳು ಹೇಳಹೆಸರಿಲ್ಲದಾಗುವುದು ಖಂಡಿತ. ಏಕರೂಪ ಬೆಳೆಗಳು – ಏಕರೂಪ ಆಹಾರ ಪದ್ಧತಿ–ಏಕರೂಪ ಸಂಸ್ಕೃತಿ ಇದೆಲ್ಲದರ ಒಟ್ಟು ಪರಿಣಾಮ. ಜಾಗತೀಕರಣ ಸಂದರ್ಭದಲ್ಲಿ ಈ ಪ್ರಕ್ರಿಯೆಗಳು ಪ್ರಾರಂಭವಾಗಿವೆ ನಿಜ; ಆದರೆ ಈ ತಿದ್ದಪಡಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಲೋಭಿತನದ ಕೃಷಿಯಿಂದಾಗಿ ಪ್ರತಿವರ್ಷ ವ್ಯವಸಾಯಿಕ ಭೂಮಿ ನಿರುಪಯುಕ್ತವಾಗುತ್ತಿರುವುದನ್ನು ವೈಜ್ಞಾನಿಕ ವರದಿಗಳು ತಿಳಿಸುತ್ತಿವೆ.

ಈ ಬಗೆಯ ಪ್ರಗತಿಯಿಂದ ನಾವು ಸಾಧಿಸಿದ್ದಾದರೂ ಏನು?ಆರ್ಥಿಕಧೃವೀಕರಣ, ಹೆಚ್ಚುತ್ತಲೇಹೋಗುವ ಬಡವ-ಬಲ್ಲಿದನ ಅಂತರ,ಅನೀತಿಯುತ ಗಳಿಕೆಯಿಂದ ಹುಟ್ಟಿದ ವಿನಾಶಕಾರಿ ಸಂಪತ್ತು, ಮನಸ್ಸಿನೊಳಗೆ ಮತ್ತು ಹೊರಗೆ ತಾಂಡವವಾಡುವ ಮಾಲಿನ್ಯ, ಇದೆಲ್ಲದರ ಪರಿಣಾಮವಾಗಿ ಹುಟ್ಟುವ ಹಿಂಸಾತ್ಮಕ ಸಮಾಜ.

ಈ ತಿದ್ದುಪಡಿ ತರುತ್ತಿರುವವರಿಗೆ ಗಾಂಧೀಕಳಕಳಿಯ ಸಮಾಜದ ‘ಕಟ್ಟಕಡೆಯಮನುಷ್ಯ’ ಕಾಣುತ್ತಿಲ್ಲವೆ?

ಬಡರೈತರ ಸಮಸ್ಯೆ ಪರಿಹಾರಮಾಡುವ ಬದಲುರೈತರನ್ನೇ ನಾಶಮಾಡುವ ಈ ತಿದ್ದುಪಡಿ ವಿನಾಶಕಾರಿಯಾದದ್ದು.

ದಶಕದಿಂದೀಚೆಗೆ ಆಗುತ್ತಿರುವ ಕಾನೂನು ತಿದ್ದುಪಡಿಗಳಾಗಲಿ, ಪಾಲಿಸಿ ಬದಲಾವಣೆಗಳಾಲಿ ಬಡವರನ್ನು, ದುರ್ಬಲರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿವೆ. ಪ್ರಕೃತಿನಾಶದಗತಿ ತ್ವರಿತವಾಗುತ್ತಿದೆ. ನಾವು ಪ್ರಕೃತಿಮಾತೆಯ ಸ್ಥನದಿಂದ ಹಾಲುಕುಡಿಯಬೇಕೆ ಹೊರತು ರಕ್ತ ಹೀರುವ ರಕ್ತಪಿಪಾಸುಗಳಾಗಬಾರದು.

– ಜಯದೇವ.ಜಿ.ಎಸ್

ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು, ಗ್ರಾಮ ಸೇವಾ ಸಂಘದ ಮಾರ್ಗದರ್ಶಕರು