
ಅಧ್ಯಕ್ಷರು, ಗ್ರಾಮ ಸೇವಾ ಸಂಘ
ಕೋವಿಡ್ ನೆಪದಲ್ಲಿ ಸರ್ಕಾರಗಳು ರೈತ, ಕಾರ್ಮಿಕ ವಿರೋಧಿ ಕಾನೂನುಗಳ ನೀತಿಗಳ ಸರಮಾಲೆಯನ್ನು ಆತುರಾತುರವಾಗಿ ಜಾರಿಗೊಳಿಸಿ, ಅಸಂಪ್ರಾದಾಯಿಕ ದುಡಿಮೆಗಾರರನ್ನು ಹೀನಾಯವಾಗಿ ಕಾಣುತ್ತ, ಅವರ ಮೇಲೆ ಸಂಕಷ್ಟಗಳ ಸುರಿಮಳೆ ಸುರಿಸಿದೆ. ಅಯೋಜಿತ ಲಾಕಡೌನ್, ಸೀಲ್‍ಡೌನ್, ಕ್ವಾರಂಟೈನ್, ಮೂಲಕ ಅವರನ್ನು ಸೋಂಕಿಗೆ ದೂಡಿ ಕೋವಿಡ್‍ಗೆ ಬಲಿಕೊಡುತ್ತಿದೆ.
ತೀರಾ ಇತ್ತೀಚೆಗೆ ಕೃಷಿ ಪ್ಯಾಕೇಜ್ ಹೆಸರಿನಲ್ಲಿ ಕೈಗಾರಿಕ ಕಾರ್ಪೋರೇಟ್‍ಕೃಷಿಯನ್ನು ಪ್ರೋತ್ಸಾಹಿಸಲು, ಎ.ಪಿ.ಎಂ.ಸಿ. ಕಾಯ್ದೆ, ಇ.ಸಿ. ಕಾಯ್ದೆಗೆ, ವಿದ್ಯುತ್ ಶಕ್ತಿ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು, ರಾಕ್ಷಸ ಕೃಷಿಆರ್ಥಿಕತೆಯನ್ನು ಭರದಿಂದ ಜಾರಿಗೊಳಿಸುತ್ತಿದೆ. ಗುತ್ತಿಗೆಕೃಷಿ, ಭೂಗುತ್ತಿಗೆಕಾಯ್ದೆಗಳನ್ನು ಜಾರಿಗೋಳಿಸುತ್ತಿದೆ. ಇದೇ ದಾರಿಯಲ್ಲಿ ಸಾಗುತ್ತಿರುವ ಕರ್ನಾಟಕ ಸರ್ಕಾರ ‘ಕರ್ನಾಟಕ ಭೂಸುಧಾರಣ ಕಾ ಕಾಯ್ದೆ” 1961ರ ಕಾಯ್ದೆಗೆ ತಿದ್ದುಪಡಿಗಳನ್ನು ತಂದು, ಅದರ ಪ್ರಗತಿಪರ, ರೈತಪರ ಆಶಯಗಳಿಗೆ ಎಳ್ಳು ನೀರು ಬಿಡುತ್ತಿದೆ. ಸೆಕ್ಷೆನ್ 79 (a), (b), (c) ಮತ್ತು 80ನ್ನು ರದ್ದು ಮಾಡಿ ಕೃಷಿಕರಲ್ಲದವರ ಕೃಷಿಭೂಮಿಯನ್ನು ಕಬಳಿಸಿಕೊಳ್ಳಲು ಸಹಕರಿಸಿ, ಕೃಷಿಕರ ಕೈಯಿಂದ ಕೃಷಿಭೂಮಿ ಕೈಜಾರಿ ಹೋಗುವಂತೆ ಮಾಡಲಾಗುತ್ತಿದೆ. ಸೆಕ್ಷೆನ್ 63ರನ್ನು ತಿದ್ದುಪಡಿ ಮಾಡಿ, 5 ಜನರೊಳಗಿನ ಕೃಷಿ ಕುಟುಂಬಗಳು 108 ಎಕರೆಗಳವರೆಗೆ ಭೂಮಿ ಹೊಂದಲು ಮತ್ತು 5ಕ್ಕಿಂತಲೂ ಹೆಚ್ಚು ಜನರಿರುವ ಕುಟುಂಬಗಳು 216 ಎಕರೆಗಳವರೆಗೂ ಭೂಮಿ ಹೊಂದಲು ಅವಕಾಶ ಕಲ್ಪಿಸಿ, ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಂಡು ಭೂಹೀನರಿಗೆ ಹಂಚುವ, ‘ಉಳುವವನಿಗೆ ಭೂಮಿ’ ಎಂಬ ಸ್ವಾತಂತ್ರ್ಯ ಸಂಗ್ರಾಮದ, ರೈತ ಆಶಯಕ್ಕೆ ವಿರುದ್ದ ದಿಕ್ಕಿನಲ್ಲಿ ಸಾಗಿ, ‘ಉಳ್ಳವರಿಗೆ ಮಾತ್ರ ಭೂಮಿ’ ಎಂಬಂತಾಗಿದೆ.
C Yatiraju, Environmental Activist & President of Gram Seva Sangh on Proposed Amendment to Land Reform Act by Karnataka Govt.
ಜಮೀನ್ದಾರಿ ಪದ್ದತಿಯನ್ನು ಸಡಿಲಗೊಳಿಸಿ, ಭೂಹೀನರಿಗೆ ಭೂಮಿ, ಚೋಮನ ಕನಸಾಗಲಿದೆ. ನವಕಾರ್ಪೋರೇಟ್‍ಗಳ ಹೂಡಿಕೆದಾರರ ಜಮೀನ್ದಾರಿ ಪದ್ದತಿಯನ್ನು ಜಾರಿಗೊಳಿಸಿ, ದೇವರಾಜ್ ಅರಸ್‍ರ 1974ರ ಭೂಸುಧಾರಣಾ ಆಶಯಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ನವಕಾರ್ಪೋರೇಟ್ ಭೂ ಜಮೀನ್ದಾರಿಯಲ್ಲಿ ರಾಕ್ಷಸಿ ಕೈಗಾರಿಕಾಕೃಷಿ ಜಾರಿಯಾಗಿ, ಭೂಮಿಬರಡಾಗಿ, ಮರುಭೂಮೀಕರಣಗೊಳ್ಳುತ್ತಾ ಸಾಗಲಿದೆ. ದಿನೇ ದಿನೇ ಉಲ್ಬಣಿಸುತ್ತಿರುವ ಜಲಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡು, ಅಂತರ್ಜಲ ಪಾತಾಳ ಸೇರಲಿದೆ. ಕೃಷಿ ಜೀವವೈವಿಧ್ಯತೆ ಸಂಪೂರ್ಣ ಹಾಳಾಗಿ ಏಕಬೆಳೆಗಳ ಸಾಮ್ರಾಜ್ಯದಲ್ಲಿ, ನಮ್ಮ ವೈವಿಧ್ಯಮಯ ಆಹಾರ ಪದ್ದತಿಗಳು, ಪಂಚತಾರ ಹೋಟೆಲ್‍ಗಳ ಶ್ರೀಮಂತರ ಸ್ವತ್ತಾಗುತ್ತವೆ. ನೈಸರ್ಗಿಕ ಕೃಷಿ ಮೂಲ ಸೌಕರ್ಯಗಳು ಮುರಿದು ಬಿದ್ದು, ಆಹಾರ ಭಧ್ರತೆ, ಫೊಶಕಾಂಶ ಭಧ್ರತೆಗಳು ಸಂಪೂರ್ಣವಾಗಿ ಹಾಳಾಗುತ್ತವೆ. ವಿಷಮಯ ಮಣ್ಣು, ಕಲುಷಿತ ನೀರು, ಹಾಳಾದ ಕೃಷಿವೈವಿದ್ಯತೆಯಲ್ಲಿ ರೋಗ ಮತ್ತು ಕೀಟ ಹಾವಳಿ ನಿವಾರಣೆಗಾಗಿ ಬಳಸಿದೆ ವಿಷರಾಸಾಯನಿಕಗಳು, ಜನರ ಆರೋಗ್ಯ ಹಾಳುಮಾಡಿ ಪ್ರಾಣಿಜನ್ಯ ವೈರಾಣು ರೋಗಗಳಿಗೆ, ಇಡೀ ಮನುಕುಲವನ್ನು ಬಲಿಕೊಡಲಾಗುತ್ತ ದೆ .
ಕಾರ್ಪೋರೇಟ್ ಪಾಳೇಗಾರಿಕೆಯ ಕೃಷಿ ವಿನಾಶಕ. ಈ ತಿದ್ದುಪಡಿಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಭೂಹೀನರಿಗೆ, ವಸತಿಹೀನರಿಗೆ ಭೂಮಿ ಹಂಚಿ, ವಲಸೆ ತಪ್ಪಿಸಿ, ಜನಪರ, ಜೀವಪರ, ಪರಿಸರಸ್ನೇಹಿ ಪವಿತ್ರ ಆರ್ಥಿಕತೆಗೆ ಮುಂದಾಗಿ, ಗ್ರಾಮಸ್ವರಾಜ್ಯದ ಹೊಸ ಯುಗಾರಂಭ ಮಾಡಬೇಕೆಂದು ಗ್ರಾಮ ಸೇವಾ ಸಂಘ ಈ ಮೂಲಕ ಕರೆ ನೀಡುತ್ತದೆ.
– ಸಿ. ಯತಿರಾಜು
ಅಧ್ಯಕ್ಷರು, ಗ್ರಾಮ ಸೇವಾ ಸಂಘ
ಗ್ರಾಮ ಸೇವಾ ಸಂಘ Flat #102, Shesha Nivas, 1st Block, 1st Main,
Thyagarajanagar, Bengaluru-560028Email ID: gramsevasanghindia@gmail.comFacebook.com/graamasevasangha | @gramasevasanghaMobile: 9980043911 | www.gramsevasangh.org