ಮದ್ಯಪಾನ ನಿಷೇಧ ಬೇಕೆ ಬೇಡವೆ….? ನಿಮ್ಮ ಅಭಿಪ್ರಾಯ ದಾಖಲಿಸಿ.

ಸ್ನೇಹಿತರೆ
ಮದ್ಯಪಾನ ನಿಷೇಧ ಬೇಕೆ ಬೇಡವೆ….? ನಿಮ್ಮ ಅಭಿಪ್ರಾಯ ದಾಖಲಿಸಿ.
ಮದ್ಯ ಪಾನಕ್ಕೆ ಅವಕಾಶ ಕೊಟ್ಟರೂ, ನಕಲಿ ಮದ್ಯ ಹಾವಳಿ ತಡೆಗೆ ಕಠಿಣ ಶಿಕ್ಷೆ ನೀಡುವ ಉಗ್ರ ಕಾನೂನು ಜಾರಿಗೊಳಿಸಬೇಕು. ನಕಲಿ ಮದ್ಯದಿಂದ ಪ್ರತಿ ವರ್ಷ ಕರ್ನಾಟಕದಲ್ಲಿ ಕಿಡ್ನಿ ಲಿವರ್ ಹಾರ್ಟ್ ಸಂಬಂಧದ ಖಾಯಿಲೆಗೆ ಲಕ್ಷಾಂತರ ಜನ ಸಾಯುತ್ತಿದ್ದಾರೆ. ಇಂತಹ ನಕಲಿ ಮದ್ಯ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಮರಣ ದಂಡನೆ ಮತ್ತು ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಶಿಕ್ಷೆ ಜಾರಿಗೆ ಬರುವವರೆಗೂ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡ ಬಾರದೆಂದು ಹೋರಾಟ ಮಾಡಬೇಕು.
ಇದೊಂದು ದೊಡ್ಡ ಅಭಿಯಾನ ಆಗಬೇಕು. ನಿಮ್ಮ ಗ್ರೂಪ್ ಗಳಲ್ಲಿ ಶೇರ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮದ್ಯ ನಿಷೇಧ ಆಂದೋಲನ,
ಬಸವರಾಜ್ – 94497 44740
ಸ್ವರ್ಣ ಭಟ್- 94803 12074
ನಮ್ಮ ಹೋರಾಟದ ಫೋಟೊ ಗಳನ್ನು ತೆಗೆದ ಕಾರ್ಯಕರ್ತೆ : ಸುಹಾಸಿನಿ ಕೌಲಗಿ Suhasini Koulagi
*****************-******************
ಕೊರೊನ ಕಾರಣದಿಂದ ರಾಜ್ಯದಲ್ಲಿ ಜಾರಿ ಇರುವ ಮದ್ಯ ಪಾನ ನಿಷೇದ ಶಾಶ್ವತವಾಗಿ ಮುಂದುವರೆಸಲು ಎಲ್ಲೆಡೆ ಆಗ್ರಹಿಸಲಾಗುತ್ತಿದೆ. ಸರ್ಕಾರದ ಆದಾಯಕ್ಕೆ ಕುಡುಕರ ಹಣ ಮುಖ್ಯ ಅಂತ ಅದನ್ನು ತೆರವುಗೊಳಿಸಲು ಕರ್ನಾಟಕ ಸರ್ಕಾರ ಯೋಚಿಸುತ್ತಿದೆ.

ಇದಕ್ಕೊಂದು ನನ್ನದೊಂದು ಸ್ಪಷ್ಟನೆ ಹೀಗಿದೆ………..
ಕರ್ನಾಟಕದ ಮೊದಲ ಮಹಿಳಾ ಕಾಂಗ್ರೆಸ್ ಆಧ್ಯಕ್ಷೆ (1950) ಮೊದಲ ಮಹಿಳಾ ಶಾಸಕಿ, ಮೊದಲ ಮಹಿಳಾ ಸಚಿವೆ (1962) ಕರ್ನಾಟಕದ ಉಕ್ಕಿನ ಮಹಿಳೆ, ಕರ್ನಾಟಕದ ಕಸ್ತೂರ್ ಬಾ ಎಂದೇ ಖ್ಯಾತರಾಗಿದ್ದ ಶ್ರೀಮತಿ ಯಶೋಧರಾ ದಾಸಪ್ಪ ಆಗಷ್ಟೇ ರಚನೆಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ಮೊದಲ ಸಚಿವೆ ಕೂಡಾ.
ಅಂದಿನ ಮೈಸೂರು ರಾಜ್ಯದಲ್ಲಿ ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ಅವಕಾಶ ವಿರಲಿಲ್ಲ. ಮೈಸೂರ್ ಬೆಂಗಳೂರ್ ನಲ್ಲಿ ಮದ್ಯ ಮಾರಾಟ ಇದ್ದರೂ, ತುಮಕೂರ್ ಜಿಲ್ಲೆಯಲ್ಲಿ ಸಾರಾಯಿ ಮಾರಾಟ ಇರಲಿಲ್ಲ. ರಾಜ್ಯದ ಅಬಕಾರಿ ಇಲಾಖೆ ಕೆಲ ಸೀಮಿತ ಜಿಲ್ಲೆಗಳಿಗೆ ಸಾರಾಯಿ ಹರಾಜು ಮಾಡುತಿತ್ತು. ಹೀಗಿರುವಾಗ 1962 ರಲ್ಲಿ ತುಮಕೂರ್ ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತಕ್ಕೆ 93 ಮಂದಿ ಬಲಿಯಾದರು. ಕಳ್ಳಭಟ್ಟಿ ತಡೆ ಮತ್ತು ಬಡ ಮದ್ಯ ವ್ಯಸನಿಗಳಿಗೆ ಅನುಕೂಲವಾಗುವಂತೆ ಗುಣಮಟ್ಟದ ಸಾರಾಯಿ ಲಿಕ್ಕರ್ ಸರಬರಾಜಿಗೆ ಅಬಕಾರಿ ಅಧಿಕಾರಿಗಳು ಶಿಫಾರಸ್ ಮಾಡಿದರು. ಇದು ರಾಜ್ಯದ ಬೊಕ್ಕಸಕ್ಕೆ ಆದಾಯ ತರುತ್ತೆ ಅಂತ ಸಂಪುಟ ಸಭೆಯಲ್ಲಿ ಅಂದಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ಮಂಡಿಸಿದರು. ಇದನ್ನು ಸಂಪುಟ ಸಭೆಯಲ್ಲಿದ್ದ ಸಮಾಜ ಕಲ್ಯಾಣ ಸಚಿವೆ ಯಶೋಧರ ದಾಸಪ್ಪ ವಿರೋಧಿಸಿದರು. ಮೈಸೂರ್ ರಾಜ್ಯದಲ್ಲಿ ಶಾಶ್ವತವಾಗಿ ಸಂಪೂರ್ಣ ಪಾನ ನಿರೋಧ ಜಾರಿಗೊಳಿಸಿ ಗಾಂಧೀಜಿ ತತ್ವ ಪಾಲಿಸಬೇಕು ಅಂತಿದ್ದರೆ, ನೀವು ತುಮಕೂರ್ ಜಿಲ್ಲೆಯಲ್ಲಿ ಸಾರಾಯಿ ಮಾರಾಟಕ್ಕೆ ಅವಕಾಶ ನೀಡ್ತೀರಾ? ಇದು ಸರಿಯಲ್ಲ ಅಂತ ವಾದಿಸಿದರು. ಇದಕ್ಕೆ ರಾಮಕೃಷ್ಣ ಹೆಗಡೆ, ಅಲ್ಲಿ ಸಾರಾಯಿ ಮಾರಾಟಕ್ಕೆ ಅವಕಾಶ ನೀಡದಿದ್ದರೆ ಮತ್ತಷ್ಟು ಕಳ್ಳ ಭಟ್ಟಿ ದುರಂತಗಳು ನಡೆಯುತ್ತೆ. ಇದನ್ನು ತಪ್ಪಿಸಲು ಸರ್ಕಾರವೇ ಉತ್ತಮ ಗುಣಮಟ್ಟದ ಸಾರಾಯಿ ಸರಬರಾಜು ಮಾಡುವುದು ಒಳ್ಳೇದು ಅಂತ ವಾದಿಸಿದರು.

ಈ ಮಾತನ್ನು ಒಪ್ಪದ ಸಚಿವೆ ಯಶೋಧರ ದಾಸಪ್ಪ, ಕಳ್ಳ ಭಟ್ಟಿ ಮಾಡುವವರನ್ನ ಹಿಡಿದು ಮಟ್ಟ ಹಾಕದೆ, ಅವರಿಗೆ ಹೆದರಿಕೊಂಡು ಸಾರಾಯಿ ಮಾರಾಟಕ್ಕೆ ಹೊರಟರೆ ಮನೆಮನೆಯಲ್ಲೂ ಹೆಣಗಳು ಉರುಳುತ್ತವೆ, ಕುಡುಕರ ಹೆಂಡತಿ ಮಕ್ಕಳ ಸಂಸದ್ ಬೀದಿಗೆ ಬೀಳುತ್ತೆ ಅಂತ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತುಮಕೂರ್ ಮತ್ತಿತರ ಜಿಲ್ಲೆಗಳಿಗೆ ಸಾರಾಯಿ ಗುತ್ತಿಗೆ ವಿಸ್ತರಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತೆ ಎಂದಾಗ, “ಕುಡುಕರ ಹಣದಲ್ಲಿ ಸರ್ಕಾರ ನಡೆಯಲಿದೆ ಬೇಕಿಲ್ಲ ” ಅಂತ ವಾದಿಸಿದರು.

ಹೀಗೆ ಸಮಾಜ ಕಲ್ಯಾಣ ಇಲಾಖೆ ಪ್ರಪ್ರಥಮ ಸಚಿವೆ ಮತ್ತು ಮೈಸೂರ್ ರಾಜ್ಯದ ಮೊದಲ ಹಣಕಾಸು ಸಚಿವ H.C.ದಾಸಪ್ಪ ಪತ್ನಿ ಶ್ರೀಮತಿ ಯಶೋಧರಾ ದಾಸಪ್ಪ ಮತ್ತು ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ನಡುವೆ ಭಾರೀ ವಾಗ್ವಾದವೇ ನಡೆಯಿತು. ಅದಾಗಲೇ ಸಾರಾಯಿ ಗುತ್ತಿಗೆದಾರರ ದಾಳಕ್ಕೆ ಸಿಕ್ಕಿ ರಾಜ್ಯದ ಎಲ್ಲೆಡೆ ಸಾರಾಯಿ ಮಾರಾಟಕ್ಕೆ ಟೊಂಕ ಕಟ್ಟಿದ್ದ ರಾಮಕೃಷ್ಣ ಹೆಗಡೆ ಮಾತಿನ ಭರದಲ್ಲಿ ದ್ವಂದ್ವಾರ್ಥದ ಮಾತಾಡಿದರು. ಇದರಿಂದ ಕೆರಳಿದ ಯಶೋಧರಮ್ಮ “ಒಬ್ಬ ಮಹಿಳೆ ಸಭೆಯಲ್ಲಿದ್ದಾಳೆಂಬುದನ್ನು ಮರೆತು ಅಸಭ್ಯವಾಗಿ ಮಾತಾಡುತ್ತೀರಾ, ನಿಮ್ಮಂಥ ಮರ್ಯಾದೆ ಇಲ್ಲದವರೊಂದಿಗೆ ನಾನು ಸಚಿವೆಯಾಗಿರುವುದಿಲ್ಲ ” ಅಂತ ಸಂಪುಟ ಸಭೆಯಲ್ಲೇ ತಮ್ಮ ರಾಜೀನಾಮೆ ಪತ್ರ ಬರೆದು ಹೊರ ಬಂದರು. ವಿಧಾನ ಸೌಧದಿಂದ ಸರ್ಕಾರಿ ಕಾರು ಸಹ ಬಳಸದೆ ಟ್ಯಾಕ್ಸಿಯಲ್ಲಿ ಮನೆಗೆ ಬಂದಿದ್ದರು.
ವಿಧಾನ ಸಭೆಯಲ್ಲಿ ತುಮಕೂರ್ ಮತ್ತಿತರ ಜಿಲ್ಲೆಗಳಲ್ಲಿ ಸಾರಾಯಿ ಸರಬರಾಜು ಮಾಡುವ ವಿಷಯ ಮಂಡನೆಯಾದಾಗ ಯಶೋಧರಮ್ಮ ಅವರನ್ನು ಬೆಂಬಲಿಸಿ ಮಾತನಾಡಿದ ಸಮಾಜವಾದಿ ನಾಯಕ ಹಾಗು ಶಾಸಕ ಶಾಂತವೇರಿ ಗೋಪಾಲಗೌಡರು, “ಜನರನ್ನು ಕುಡುಕರನ್ನಾಗಿ ಅವರ ದುಡಿಮೆ ಹಣವನ್ನು ಹೆಂಡಕ್ಕೆ ಸುರಿಯುವ ಹಾಗೆ ಸರ್ಕಾರ ಮಾಡುತ್ತಿದೆ. ಬಡವರನ್ನು ಸರ್ಕಾರ ಭಿಕ್ಷುಕರನ್ನಾಗಿ ಮಾಡುತ್ತಿದೆ. ಮದ್ಯಪಾನ ನಿಷೇಧ ರದ್ದು ಮಾಡುವುದಕ್ಕೆ ನನ್ನ ವಿರೋಧವಿದೆ” ಎಂದು ಸರ್ಕಾರದ ವಿರುದ್ಧ ಗುಡುಗಿದರು. ಆದರೆ ಸಾರಾಯಿ ಗುತ್ತಿಗೆದಾರರ ಲಾಬಿ ಮುಖ್ಯ ಮಂತ್ರಿ ನಿಜಲಿಂಗಪ್ಪ ಸಹಿತ ಎಲ್ಲ ಅಧಿಕಾರಸ್ಥರನ್ನು ಸೆಳೆದುಕೊಂಡಿತ್ತು.

ಹೀಗೆ ಮೊದಲ ಮಹಿಳಾ ಸಚಿವೆ ಯಶೋಧರ ದಾಸಪ್ಪ ಹೋರಾಟ ಸೋತಿತ್ತು.
ಮೈಸೂರ್ ರಾಜ್ಯದಲ್ಲಿ ಗಾಂಧೀಜಿ ಹೇಳಿದ ತತ್ವ ಪಾಲನೆಯಲ್ಲಿ ಪ್ರಮುಖ ವಾದ ಮದ್ಯಪಾನ ಸಂಪೂರ್ಣ ನಿಷೇದ ಆಗುವವರೆಗೂ ವಿಧಾನ ಸೌಧದ ಮೆಟ್ಟಿಲು ಹತ್ತುವುದಿಲ್ಲ ಎಂದು ಶಪಥ ಮಾಡಿದ ಯಶೋಧರಾ ದಾಸಪ್ಪ ಕೊನೆ ಉಸಿರಿರುವವರೆಗೂ ನುಡಿದಂತೆ ನಡೆದುಕೊಂಡರು. ಗಾಂಧೀಜಿ ಮತ್ತು ಕಸ್ತೂರ್ ಬಾ ಟ್ರಸ್ಟಿನ ರೂವಾರಿ ಕಾಕಾ ಕಾಲೇಲ್ಕರ್ ಅವರಿಗೆ ಕೊಟ್ಟ ಮಾತಿನಂತೆ ಕರ್ನಾಟಕದಲ್ಲಿ ಕಸ್ತೂರ್ ಬಾ ಟ್ರಸ್ಟ್ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಅಶಕ್ತ ಮಹಿಳೆಯರಿಗೆ ಹೆರಿಗೆ ತರಬೇತಿ, ಹೊಲಿಗೆ ತರಬೇತಿ ಮತ್ತಿತರ ವೃತ್ತಿ ಪರ ಕೆಲಸಗಳನ್ನು ಕಲಿಸುವ ಮೂಲಕ ಮಹಿಳಾ ಸ್ವಾವಲಂಬನೆಗೆ ಶ್ರಮಿಸಿದರು. ಹಾಸನ ಜಿಲ್ಲೆ ಅರಸೀಕೆರೆ ಯಲ್ಲಿರುವ ಕಸ್ತೂರ್ ಬಾ ಟ್ರಸ್ಟ್ ನಲ್ಲಿ ಬಹುತೇಕ ಜೀವನ ಕಳೆದರು. ಇವರ ಸೇವೆಗೆ 1973ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಬಂದಿತ್ತು.
1972ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಮನೆಗೆ ಬಂದು ಮುಖ್ಯಮಂತ್ರಿ ಪದವಿ ಸ್ವೀಕರಿಸುವಂತೆ ಕೋರಿದರೂ, ಪಾನ ನಿರೋಧಕ್ಕೆ ಪುರುಷ ಶಾಸಕರು ಒಪ್ಪುವುದಿಲ್ಲ ಎಂದು ತಮ್ಮ ಶಿಷ್ಯ ದೇವರಾಜ ಅರಸುವನ್ನು ಮುಖ್ಯ ಮಂತ್ರಿ ಮಾಡಿದ, ಕರ್ನಾಟಕದ ಕಸ್ತೂರ್ ಬಾ ಎಂದೇ ಖ್ಯಾತ ರಾದ ಪದ್ಮ ಭೂಷಣ ಯಶೋಧರ ದಾಸಪ್ಪ ಅನಾಥ ಹೆಣ್ಣು ಮಕ್ಕಳಿಗೆ ಕಟ್ಟಿಸಿರುವ ಅರಸೀಕೆರೆ ಆಶ್ರಮದಲ್ಲಿ ಗಾಂಧೀಜಿಯವರ ಚಿತಾ ಭಸ್ಮ ವನ್ನು ಇಡಲಾಗಿದೆ.

ಇವರ ಪತಿ H. C. ದಾಸಪ್ಪ k.c.ರೆಡ್ಡಿ ಸಂಪುಟದಲ್ಲಿ ಮೊದಲ ಹಣಕಾಸು ಸಚಿವರಾಗಿದ್ದರು. ನೆಹರು ಸಂಪುಟದಲ್ಲಿ ರಾಜ್ಯದ ಮೊದಲ ರೈಲ್ವೆ ಸಚಿವರಾಗಿದ್ದರು. ಈ ದಂಪತಿಗಳ ಮಗ H. D. ತುಳಸೀದಾಸ ಮೈಸೂರ್ ಲೋಕಸಭಾ ಕ್ಷೇತ್ರದ ಏಕೈಕ ಹ್ಯಾಟ್ರಿಕ್ ಸಂಸದ (1967-1980). ಯಶೋಧರ ದಾಸಪ್ಪ ತಂದೆ ಬ್ಯಾರಿಸ್ಟರ್ K. H. ರಾಮಯ್ಯ ಮತ್ತು H.C.ದಾಸಪ್ಪ ತಂದೆ ಜಸ್ಟಿಸ್ H.ಚೆನ್ನಯ್ಯ ಹಿಂದುಳಿದ ವರ್ಗಗಳ ಹರಿಕಾರರು. ದೇಶದಲ್ಲೆ ಮೊದಲ ಬಾರಿ ಮೈಸೂರ್ ಸಂಸ್ಥಾನದಲ್ಲಿ ಮೀಸಲಾತಿ(21-8-19)ತರಲು ಶ್ರಮಿಸಿದವರು. ನಾಲ್ವಡಿ ಕೃಷ್ಣ ರಾಜ ಒಡೆಯರ್ ಆಡಳಿತದಲ್ಲಿ ಮಿರ್ಜಾ ಇಸ್ಮಾಯಿಲ್ ನಂತರ ದಿವಾನರಾಗಬೇಕಿದ್ದ ಬ್ಯಾರಿಸ್ಟರ್ K. H. ರಾಮಯ್ಯ ಅಕಾಲಿಕ ಮರಣಕ್ಕೀಡಾದರು (5-10-1933) ಇವರು ರಾಜ್ಯ ಒಕ್ಕಲಿಗರ ಸಂಘ (1-4-1906) ಮತ್ತು ಆದಿಚುಂಚನಗಿರಿ ಮಠ (1-2-1928)ಸಂಸ್ಥಾಪಕರು. ಒಕ್ಕಲಿಗರಿಗಲ್ಲದೆ ಕುರುಬರಿಗೆ ರಾಜ್ಯ ಕುರುಬರ ಸಂಘ. ದಲಿತರಿಗೆ ಆದಿ ಕರ್ನಾಟಕ ಸಂಘ,ಸೇರಿದಂತೆ ಎಲ್ಲಾ ಜಾತಿಗೂ ಸಂಘ ಸ್ಥಾಪಿಸಿಕೊಟ್ಟು. ಆ ಜನಾಂಗಗಳ ಸಾಮುದಾಯಿಕ ಬೆಳವಣಿಗೆಗೆ ಕಾರಣಕರ್ತರು. ಇವರ ಮಗಳು ಯಶೋಧರ ದಾಸಪ್ಪ ಸಹ ತಂದೆಯಂತೆ ಹಾಗೂ ಗಾಂಧೀ ಸಲಹೆಯಂತೆ ಹರಿಜನ -ಗಿರಿಜನರಿಗೆ ಶ್ರಮಿಸಿದ ಉದಾತ್ತ ಜೀವಿ. ರಾಜ್ಯದಲ್ಲಿ ಎಲ್ಲೆಲ್ಲಿ ಯಶೋಧರ ಪುರ ಹೆಸರಿನ ಊರಿದೆಯೋ, ಅವೆಲ್ಲಾ ಯಶೋಧರ ದಾಸಪ್ಪ ಭೂಮಿ ಖರೀದಿಸಿ ದೀನ ದಲಿತರಿಗೆ ಹಂಚಿದ ಊರುಗಳು. ಇಂಥ ಉದಾತ್ತ ಕರ್ನಾಟಕದ ಉಕ್ಕಿನ ಮಹಿಳೆಗೆ 1980ರಲ್ಲಿ ಮೃತರಾದಾಗ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಸರ್ಕಾರಿ ಮರ್ಯಾದೆ ಮಾಡದಂತೆ ನೋಡಿಕೊಂಡರು. ಈ ದ್ವೇಷಕ್ಕೆ ಕಾರಣ ಇವರ ಮಗ ಮೈಸೂರ್ ನ ಏಕೈಕ ಹ್ಯಾಟ್ರಿಕ್ ಸಂಸದ H. D. ತುಳಸೀದಾಸ್ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ರೈಲ್ನಲ್ಲಿ ದೆಹಲಿಗೆ ಹೋಗುವಾಗ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಗುಂಡೂರಾವ್ ರನ್ನು ರೈಲಿನಿಂದ ಇಳಿಸಿ, ಹೊರಗೆ ಕಳಿಸಿದ್ದು. ಇಂತಹ ಜನ ಸೇವಾ ಜನ ರಾಜಕೀಯದಿಂದ ನಿರ್ನಾಮ ಮಾಡಿದ್ದು ಬೇರೆ ಯಾರೂ ಅಲ್ಲಾ, ಜಾತಿ-ಹಣ -ಪಕ್ಷದ ಹಿಂದೆ ಬಿದ್ದ ಮುಠಾಳ ಜನರು. ಧಿಕ್ಕಾರವಿರಲಿ ಈ ದರಿದ್ರ ದಡ್ಡ ಮತದಾರರಿಗೆ.

ಈಗ ಮತ್ತೊಮ್ಮೆ ಶಾಶ್ವತವಾಗಿ ಮದ್ಯ ಪಾನ ನಿಷೇದ ಮಾಡುವ ಅವಕಾಶ ಬಂದಿದೆ. ಎಲ್ಲ ಸಜ್ಜನರು ಸಂಘಟಿತವಾಗಿ ಹೋರಾಟ ನಡೆಸಿದರೆ ಜಯದ ಫಲ ಸಿಗುತ್ತೆ.

ಸ್ನೇಹಿತರೆ,1962ರಲ್ಲಿ ಸರ್ಕಾರ ಹೇಳಿದಂತೆ ಉತ್ತಮ ಗುಣ ಮಟ್ಟದ ಮದ್ಯ ಸರಬರಾಜು ಮಾಡಲು ತುಮಕೂರ್ ಮತ್ತಿತರ ಜಿಲ್ಲೆಗಳಲ್ಲಿ ಸಾರಾಯಿ ಮಾರಾಟಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ ಈಗ ಆಗಿರುವುದೇನು ಕಳ್ಳ ಭಟ್ಟಿಗಿಂತಲೂ ಅಪಾಯಕಾರಿಯಾದ ನಕಲಿ ಮದ್ಯ ತಯಾರಿಕೆ ಮತ್ತು ಮಾರಾಟ ಎಗ್ಗು ಸಿಗ್ಗಿಲ್ಲದಂತೆ ನಡೆಯುತ್ತಿದೆ. ಕುಡಿಯುವ ಮದ್ಯಕ್ಕೆ ಕಬ್ಬಿನಿಂದ ಬರುವ ಕಾಕಂಬಿಯಿಂದ ತೆಗೆವ ಸಾರ ರೆಕ್ಟಿಫೈಡ್ ಸ್ಪಿರಿಟ್ ಮೊದಲದರ್ಜೆ ಕ್ವಾಲಿಟಿ ಕುಡಿಯಲು ಯೋಗ್ಯವಾಗಿರುತ್ತದೆ. ನಂತರ ಕಾಕಂಬಿ ಕೊಳೆಸಿ ತೆಗೆವ ಸ್ಪಿರಿಟ್ ಅಶುದ್ದವಾಗಿರುತ್ತದೆ. ಇದನ್ನೆ ಕಳಪೆ ದರ್ಜೆ ವಿಸ್ಕಿ ಬ್ರಾಂದಿ ರಮ್, ಜಿನ್ ಗೆ ಡಿಸ್ಟಿಲ್ಲರಿಗಳಲ್ಲಿ ಬಳಸಲಾಗುತ್ತಿದೆ. ಕುಡುಕರ ಸಂಖ್ಯೆ ಜಾಸ್ತಿಯಾಗಿ ನೈಸರ್ಗಿಕ ಕಾಕಂಬಿ ಮದ್ಯ ಸಾರ ಸಾಕಾಗದಾಗಿ , ರಾಸಾಯನಿಕ ಮಿಥೇನ್ ಬಳಸಲಾಗುತ್ತಿದೆ. ಇಂತಹ ಕಳಪೆ ಅಪಾಯಕಾರಿ ಸ್ಪಿರಿಟ್ ನಿಂದ ಮಾಡಿದ ಮದ್ಯಗಳು ಕುಡುಕರ ಕರುಳು, ಲಿವರ್, ಕಿಡ್ನಿ, ಹೃದಯವನ್ನೆಲ್ಲ ಹಾಳು ಮಾಡುತ್ತಿದೆ.
ಟಾಯ್ಲೆಟ್ ಕ್ಲೀನರ್, ಫಿನಾಯಿಲ್, ಡೆಟೊಲ್, ಟಿಂಚರ್, ಸ್ಯಾನಿಟೈಜ್ ಗೆ ಬಳಸುವ ಮಿಥೇನ್ ರಾಸಾಯನಿಕ ಸುಲಭವಾಗಿ ಸಿಗುವುದರಿಂದ ಮನೆ ಮನೆಯಲ್ಲೂ ಮಿಥೇನ್ ರಾಸಾಯನಿಕ್ಕೆ ನೀರು ಮಿಶ್ರಣ ಮಾಡಿ ಒಂದಿಷ್ಟು ಅದರ ಸ್ಟ್ರಾಂಗ್ ಕಡಿಮೆ ಮಾಡುತ್ತಾರೆ. ಇದನ್ನೇ ಲೀಟರ್ ಗಟ್ಟಲೆ ಕ್ಯಾನ್ ಗಳಲ್ಲಿ ಮಾರುವ ದಂಧೆ ಕೋರರು ಇದ್ದಾರೆ. ಇವರ ಬಳಿ ಎಲ್ಲಾ ಬ್ರಾಂಡಿನ ಸ್ಟಿಕರ್ ಲೇಬಲ್ ಗಳು, ಮತ್ತು ಆಯಾ ಬ್ರಾಂಡಿನ ಫ್ಲೇವರ್ ಗಳು, ಕಲರ್ ಗಳು, ಅದರ ಬಾಟಲ್ ಗಳು ಸಿಗುತ್ತದೆ.

ಬೆಂಗಳೂರು ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರ್ ಎಲ್ಲಾ ಕಡೆ ಈ ದಂಧೆ ಕೋರರಿದ್ದಾರೆ.
ಇವರಿಂದ ನಕಲಿ ಮದ್ಯಕ್ಕೆ ಬೇಕಾದ ಸಾಮಗ್ರಿ ಖರೀದಿಸುವ ನಕಲಿ ಮದ್ಯ ತಯಾರಕರು ಮತ್ತು ವ್ಯಾಪಾರಿಗಳು ಈಗ ತಮ್ಮ ಮನೆಗಳಲ್ಲೆ ತಯಾರಿಸಿ ಸ್ಥಳೀಯ ಬಾರ್, ವೈನ್ ಸ್ಟೋರ್ ಗಳಿಗೆ ಸರಬರಾಜು ಆಗುತ್ತೆ.

ಸರ್ಕಾರ ಅವಿವೇಕತನದಿಂದ ಹೆಚ್ಚಿಸುವ ಅಬಕಾರಿ ತೆರಿಗೆ ನಕಲಿ ಮದ್ಯ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಹಬ್ಬ. 10 ರೂಪಾಯಿ ವೆಚ್ಚದಲ್ಲಿ ತಯಾರಾಗುವ ನಕಲಿ ಮದ್ಯವನ್ನು ಸರ್ಕಾರದ ದುಬಾರಿ ತೆರಿಗೆಯಿಂದ ಅಸಲಿ ಮದ್ಯದ 100 ರೂಪಾಯಿಗೆ ಮಾರಬಹುದು. ಇದು ಸರ್ಕಾರದ ಬೊಕ್ಕಸಕ್ಕೂ ದೋಖಾ, ಅಸಲಿ ಮದ್ಯ ತಯಾರಿಕ ಕಂಪನಿಗೂ ಮೋಸ, ಕುಡಿದವರು ಮಾತ್ರ ಗೋತಾ.
ಇಂತಹ ನಕಲಿ ಮಿಥೇನ್ ಮದ್ಯ ತಯಾರಿಕೆ ಹೊಸದೇನಲ್ಲ. ಸಾರಾಯಿ ಹುಟ್ಟಿದಾಗಿಂದ ಇದೆ. ಸರ್ಕಾರಿ ಗುಣ ಮಟ್ಟದ ಸಾರಾಯಿಯನ್ನು ಮಾರಿದರೆ ಕಮಿಷನ್ ಕಮ್ಮಿ ಅಂತ ಕೆಮಿಕಲ್ ಮಿಥೇನ್ ನಿಂದ ಮಾಡಿದ ನಕಲಿ ಸಾರಾಯಿಯನ್ನೇ ಗುತ್ತಿಗೆದಾರರು ಮಾರುತ್ತಿದ್ದರು. ಈಗ ಸಾರಾಯಿ ನಿಷೇದದ ನಂತರ ಸ್ಕಾಚ್ ಸಹಿತ ಎಲ್ಲಾ ರೀತಿಯ ಬ್ರಾಂಡಿ ವಿಸ್ಕಿ ರಮ್ ಜಿನ್ ಗಳನ್ನು ನೈಸರ್ಗಿಕ ಕಾಕಂಬಿ ಮದ್ಯ ಸಾರದ ಬದಲು ರಾಸಾಯನಿಕ ಮಿಥೇನ್ ಬಳಸಿ ನಕಲಿ ತಯಾರಿಸಲಾಗುತ್ತಿದೆ.

ಮೊದಲೆಲ್ಲ ಕಳಪೆ ದರ್ಜೆ ವಿಸ್ಕಿ ಬ್ರಾಂಡಿ ರಮ್ ಗಳನ್ನು, ಅದರಲ್ಲೂ ಕ್ವಾರ್ಟರ್ ಬಾಟಲ್ ಗಳಲ್ಲಷ್ಟೇ ನಕಲಿ ಮಾಡಿ ಮಾರುತಿದ್ದವರು, ಈಗ ಎಂಥ ವಿದೇಶಿ ಸ್ಕಾಚ್, ಮತ್ತು ದೊಡ್ಡ ಬಾಟಲ್ ಗಳಲ್ಲೇ ನಕಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇಂತಹ ಕಳ್ಳ ದಂಧೆಯಲ್ಲಿ ತೊಡಗಿರುವ ತಯಾರಕರು, ಮಾರಾಟಗಾರರು ದಿನ ಬೆಳಗಾಗುವುದರೊಳಗೆ ಕೋಟ್ಯಧಿಪತಿಗಳಾಗುತ್ತಿದ್ದಾರೆ.
ಇಂತಹ ನಕಲಿ ಮದ್ಯದ ಹಾವಳಿ ಅಸಲಿ ಮದ್ಯಕ್ಕಿಂತ ಹೆಚ್ಚಾಗಿರುವುದರಿಂದ ಪ್ರತಿ ವರ್ಷ ಮದ್ಯ ಸಂಬಂಧದ ಖಾಯಿಲೆಯಿಂದ ನಮ್ಮ ಕರ್ನಾಟಕದಲ್ಲಿ ಸಾಯುವವರ ಸಂಖ್ಯೆ 5ಲಕ್ಷಕ್ಕೂ ಅಧಿಕ. ಲಿವರ್ ಸಿರೋಸಿಸ್ ಹೆಪಟೈಟಿಸ್ ಬಿ, ಸಿ, ಯಿಂದ ಸಾಯುವವರ ಸಂಖ್ಯೆಯೇ 2ಲಕ್ಷ ದಾಟುತ್ತದೆ. ಕುಡುಕರಲ್ಲಿ ಕಿಡ್ನಿ ಸಮಸ್ಯೆ, ಹೃದಯ ಬೇನೆ, ಶುಗರ್ ಬಿಪಿ ಹೆಚ್ಚಾಗಿರುವುದೇ ಅಪಾಯಕಾರಿ ನಕಲಿ ಮದ್ಯ ಸೇವನೆಯಿಂದ.
ಇದೆಲ್ಲ ಅಬಕಾರಿ ಇಲಾಖೆಗೆ ಗೊತ್ತಿಲ್ಲ ಅನ್ಕೋಬೇಡಿ. ಇಂತಹ ಮನೆ ಹಾಳು ಜನರಿಗೆ ಕುಮ್ಮಕ್ಕು ಸಿಗುತ್ತಿರುವುದೇ ಭ್ರಷ್ಟ ಅಬಕಾರಿ ಸಚಿವ ಮತ್ತು ಅಧಿಕಾರಿಗಳಿಂದ

ನೋಡಿ ಇದರ ಪರಿಣಾಮದಿಂದ ನಕಲಿ ಮದ್ಯಗಳು ಕರ್ನಾಟಕದ ಮೂಲೆ ಮೂಲೆ ತಲುಪಿತು. ಹೆಂಡ ಮಾರಿ, ಜನರನ್ನು ಕುಡುಕರನ್ನಾಗಿ ಮಾಡಿ, ನೂರಾರು ಕುಟುಂಬಗಳ ನಾಶಕ್ಕೆ, ಕಾಲದಿಂದ ಕಾಲಕ್ಕೆ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾರಣ ಆದವು. ಲಿಕ್ಕರ್ ನ ಎಲ್ಲಾ ನಮೂನೆಗಳು ಪ್ರತಿ ಹಳ್ಳಿಹಳ್ಳಿಯ ಕಿರಾಣಿ ಅಂಗಡಿಯಲ್ಲಿ ದೊರೆಯುತ್ತಿದೆ. ಗಂಡಸರು, ಹೆಂಗಸರು, ಮಕ್ಕಳೆನ್ನದೆ ಎಲ್ಲರೂ ಕುಡಿಯಲಾರಂಭಿಸಿದ್ದಾರೆ.

ಇದರ ವಿರುದ್ಧ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೋರಾಟ ಆರಂಭಿಸಿದ್ದಾರೆ. ಅವರ ಹೋರಾಟಕ್ಕೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ.

ಬಹು ಮುಖ್ಯವಾಗಿ ಮದ್ಯ ಪಾನ ಸಂಪೂರ್ಣ ನಿಷೇದ ವಾಗ ಬೇಕು ಇಲ್ಲವೇ ನಕಲಿ ಮದ್ಯ ತಯಾರಿಕೆ ಸಂಪೂರ್ಣ ನಿಲ್ಲಿಸಲು ನಕಲಿ ಮದ್ಯ ತಯಾರಿಸುವ ಮತ್ತು ಮಾರುವವರಿಗೆ ಮರಣ ದಂಡನೆ ಹಾಗೂ ಅವರ ಆಸ್ತಿ ಮುಟ್ಟು ಗೋಲು ತರಹದ ಕಠಿಣ ಶಿಕ್ಷೆ ನೀಡುವ ಹೊಸ ಕಾನೂನು ಜಾರಿ ಮಾಡಬೇಕು. ಅಲ್ಲಿವರೆಗೂ ಮದ್ಯ ಮಾರಾಟ ನಿಷೇದ ಜಾರಿಯಲ್ಲಿರಲಿ.

ಈ ಬಗ್ಗೆ ವ್ಯಾಪಕ ಜನ ಜಾಗೃತಿ ಅಭಿಯಾನ ಮತ್ತು ಸರ್ಕಾರವನ್ನು ಎಚ್ಚರಿಸುವ ಹಕ್ಕು ಒತ್ತಾಯದ ಪ್ರತಿಭಟನೆ ಸಹೃದಯಿ ಜನರೆಲ್ಲಾ ಮಾಡ ಬೇಕು.
-ಎಸ್. ಪ್ರಕಾಶ್ ಬಾಬು
ಪತ್ರಕರ್ತ – ಗ್ರಂಥ ಕರ್ತ