ನನ್ನ ವೈಯಕ್ತಿಕ ಹಣಕಾಸಿನ ವ್ಯವಹಾರದ ಬಗ್ಗೆ ಹಾಗೂ ಗ್ರಾಮಸೇವಾಸಂಘ ನಡೆಸುತ್ತಿರುವ ಪವಿತ್ರ ಆರ್ಥಿಕತೆಯ ಸತ್ಯಾಗ್ರಹದ ಹಣಕಾಸಿನ ವ್ಯವಹಾರದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ. ಅವರೆಲ್ಲರಿಗೂ ಸೂಕ್ತ ಉತ್ತರವನ್ನು ನೀಡುವುದು ನನ್ನ ವೈಯಕ್ತಿಕ ಕರ್ತವ್ಯವೂ ಹೌದು, ಸಾಂಸ್ಥಿಕ ಅಗತ್ಯವೂ ಹೌದು.
ಉದಾಹರಣೆಗೆ, ಶ್ರೀನಾಥ ಎಂಬುವವರು ನನಗೆ ಬಂದಿದ್ದ ಗಾಂಧಿ ಸೇವಾ ಪ್ರಶಸ್ತಿಯ 5 ಲಕ್ಷ ರೂಪಾಯಿ ಎಲ್ಲಿ ಹೋಯಿತು ಎಂದು ಕೇಳಿದ್ದಾರೆ. ಪ್ರಶಸ್ತಿಯ ಸಂಪೂರ್ಣ ಮೊತ್ತವನ್ನು ಹೆಗ್ಗೋಡಿನ ಶ್ರಮಜೀವಿ ಆಶ್ರಮದ ನಿರ್ವಹಣೆಗಾಗಿ ಬಹಳ ಹಿಂದೆಯೇ ಕೊಟ್ಟಿರುತ್ತೇನೆ. ಶ್ರೀನಾಥರೇ ಮತ್ತೊಂದು ಪ್ರಶ್ನೆ ಕೇಳಿ, ಈಗಿನ ಸತ್ಯಾಗ್ರಹದ ಪೋಸ್ಟ್‍ಗಳನ್ನು ಯಾರು ಸ್ಪಾನ್‍ಸರ್ ಮಾಡಿದರು ಎಂದು ಕೇಳಿದ್ದಾರೆ. ನಾವು ಮಾಡಿರುತ್ತೇವೆ ಹಾಗೂ ಸ್ನೇಹಿತರುಗಳು ನೀಡಿರುವ ಸಣ್ಣ ಪುಟ್ಟ ದೇಣಿಗೆಯ ಮೂಲಕ ಮಾಡಿರುತ್ತೇವೆ. ಪ್ರತಿ ತಿಂಗಳ ದಾನಿಗಳು ಹಾಗೂ ಹಿತೈಷಿಗಳು ಅಭಿಯಾನಕ್ಕೆ ಈ ದೇಣಿಗೆಯನ್ನು ನೀಡುರುತ್ತಾರೆ, ಪ್ರಸ್ತುತಸಾಲಿನ ಆಡಿಟಿಂಗ್ ಆದ ನಂತರ, ತಿಳಿಸಲಾಗುವುದು, ಇಷ್ಟವಿದ್ದವರು ಕಛೇರಿಗೆ ಬಂದು ಪರಿಶೀಲಿಸಬಹುದಾಗಿದೆ.
ಸ್ಪಾನ್ಸರ್ಡ್ ಪೋಸ್ಟ್ ಏಕೆ ಬೇಕಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಳ್ಳೆಯ ಪ್ರಶ್ನೆ. ನಮ್ಮವರ ನಡುವೆಯೇ ಉಳಿದು ಈ ಚಳುವಳಿ ಕೂಪಮಂಡೂಕವಾಗಬಾರದು, ನಮ್ಮವರಲ್ಲದವರನ್ನೂ ತಲುಪಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಮಾಡಿದೆವು. ಈಗ ಬರುತ್ತಿರುವ ವಿಮರ್ಶಾತ್ಮಕ ಪ್ರಶ್ನೆಗಳನ್ನು ಎದುರಿಸಬೇಕೆಂದೇ ಹಾಗೆ ಮಾಡಿದೆವು.
ನಾನು ಒಬ್ಬ ಜೋಕರ್ ಎಂದು, ಒಂದು ಸಂದರ್ಭದಲ್ಲಿ ನಾನು ಹೇಳಿಕೊಂಡದ್ದನ್ನು ಅನೇಕರು ಹೌದು ಹೌದು ಎಂದು ಸಮ್ಮತಿ ಸೂಚಿಸಿದ್ದಾರೆ. ಸಂತೋಷ. ಹಿಂದಿರದ ಮುಂದಿರದ, ಬಡಜೋಕರನಾಗಿ ಇನ್ನು ಮುಂದೆ ಉಳಿಯುವ ನಿರ್ಧಾರ ಮಾಡಿದ್ದೇನೆ ನಾನು. ಹಣವನ್ನು ತಿರಸ್ಕರಿಸಿದ್ದೇನೆ. ಅಧಿಕಾರ ರಾಜಕಾರಣದ ಮೆಟ್ಟಿಲೇರುವ ಯಾವ ಆಶಯವೂ ನನಗಿಲ್ಲ. ನಾನು ಜೋಕರ್ ಎಂದದ್ದನ್ನು ನನಗೆ ನೆನಪಿಸಿದವರಲ್ಲಿ ಅನೇಕರು ಭಟ್ಟರು ಶಾಸ್ತ್ರಿಗಳು ಜಂಗಮರು ಇರುವುದು ಆಶ್ಚರ್ಯದ ಸಂಗತಿಯೇನಲ್ಲ. ಅವರೆಲ್ಲರೂ ಪುರಂದರದಾಸರನ್ನು ಓದಿಕೊಂಡವರೇ ಆಗಿರುತ್ತಾರೆ. ಹಾಗಾಗಿ ನನ್ನ ಮಾತಿನ ಒಳಾರ್ಥ ಅರಿವಾಗಿದೆ ಅವರಿಗೆ. ದಾಸರು ಹೇಗೆ, ತನ್ನನ್ನೇ ಗೇಲಿಮಾಡಿಕೊಳ್ಳುತ್ತ ಆಪಾದನೆಗಳಿಗೆ ತನ್ನನ್ನು ಗುರಿಪಡಿಸಿಕೊಳ್ಳುತ್ತ ಹಳತಿನಿಂದ ಕಳಚಿಕೊಂಡು ಹೊರಬಂದರು ಎಂಬ ಅರಿವಿರುವವರೇ ಹೌದು ಅವರೆಲ್ಲ.
ನಿಜವಾದ ಜೋಕರನಾಗಲಿಕ್ಕೆ ನನಗೆ ಇನ್ನೂ ಬಹಳಷ್ಟು ತಯಾರಿಬೇಕಿದೆ. ಬಹಳಷ್ಟು ನಿಂದನೆಗೆ ಗುರಿಯಾಗಬೇಕಿದೆ ನಾನು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಆದರೆ ಸಣ್ಣದೊಂದು ಸಂಗತಿ ನಿಮ್ಮ ಗಮನದಲ್ಲಿರಲಿ. ನನ್ನನ್ನು ಗೇಲಿ ಮಾಡಿ, ಆದರೆ ನಾನು ಪ್ರತಿನಿಧಿಸುವ ರಂಗಮಾಧ್ಯಮವನ್ನು ಗೇಲಿ ಮಾಡದಿರಿ ದಯಮಾಡಿ. ನಾಟಕವೆಂಬುದು ಪಂಚಮವೇದ ಎಂಬುದನ್ನು ಮರೆಯದಿರಿ.
ಪ್ರೀತಿಯಿಂದ
-ಪ್ರಸನ್ನ
ರಂಗಕರ್ಮಿ ಮತ್ತು ನಾಟಕಕಾರ,
ಗ್ರಾಮ ಸೇವಾ ಸಂಘ