ಪವಿತ್ರ ಆರ್ಥಿಕತೆಯ ಜಾರಿಗಾಗಿ ಇತ್ತೀಚೆಗೆ ನಾನು ಕೈಗೊಂಡಿದ್ದ ಉಪವಾಸ ವ್ರತವನ್ನು ಬೆಂಬಲಿಸುತ್ತಾ ಕೆಲವು ಸ್ನೇಹಿತರು, ನೀವು ಕೈಗೊಂಡ ವ್ರತದ ಸಮಯ ಸೂಕ್ತವಿರಲಿಲ್ಲ ಎಂದಿದ್ದಾರೆ. ಉಪವಾಸದಂತಹ ಕಠಿಣ ಕ್ರಮವನ್ನು ಕೈಗೊಳ್ಳುವ ಮೊದಲು ಯೋಚಿಸಿ ನಿರ್ಧರಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಗುಳೆ ಎದ್ದಿದ್ದ ಬಡವರ ದೀನ ಮುಖಗಳನ್ನು ಪತ್ರಿಕೆಗಳಲ್ಲಿ ಕಂಡು ಧಿಡೀರನೆ ನಿರ್ಧಾರ ತಳೆದಿದ್ದರೆ ನಿಮ್ಮ ಮಾತು ಒಪ್ಪುತ್ತಿದ್ದೆ. ಆದರೆ ಪರಿಸ್ಥಿತಿ ಹಾಗಿರಲಿಲ್ಲ. ಚರಕ ಮುಚ್ಚಿತ್ತು ! ಚರಕದ ಪರವಾಗಿ ಸಹಾಯ ಯಾಚಿಸಲೆಂದು ಬೆಂಗಳೂರಿಗೆ ಬಂದಿದ್ದೆ. ಹಾಗೆ ಬಂದವನು ಬೆಂಗಳೂರಿನ ನನ್ನ ತಮ್ಮನ ಅನುಕೂಲಕರ ಮನೆಯಲ್ಲಿ, ನಿಮ್ಮಂತೆಯೇ, ಅನುಕೂಲಕರ ಬಂಧಿಯಾಗಿದ್ದೆ. ಆಗ ಗುಳೆ ಕೆಲಸಗಾರರ ಮುಖ ಪತ್ರಿಕೆಗಳಲ್ಲಿ ಕಂಡೆ. ನನ್ನ ದು:ಖದ ಕಟ್ಟೆಯೊಡೆಯಿತು. ಯಾವ ಸಂಸ್ಥೆಯನ್ನು, ಬಡವರು ಗುಳೆ ಏಳಬೇಕಾದ ಸಂದರ್ಭವೇ ಬಾರದಿರಲಿ ಎಂದು, ಎರಡೂವರೆ ದಶಕ ದುಡಿದು ಕಟ್ಟಿದ್ದೆನೋ, ಯಾವುದು ಪವಿತ್ರ ಆರ್ಥಿಕತೆಗೊಂದು ಗಟ್ಟಿ ಮಾದರಿಯಾಗತೊಡಗಿತ್ತೋ, ಅಂತಹ ಚರಕ ತನ್ನದೇನೂ ತಪ್ಪಿರದೆ ಮುಚ್ಚಿತ್ತು. ಇತ್ತ ಇಡೀ ದೇಶದ ಬಡವರು ಹಸಿದ ಹುಳುಗಳಂತೆ ಮೇಲೆದ್ದು ಹರಿದಾಡತೊಡಗಿದ್ದರು. ತಮ್ಮದಾದ ಯಾವುದೇ ತಪ್ಪಿರದ ಈ ದೇವರಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ನಾವು ಪಾಪಿಗಳು ಅನ್ನಿಸಿತು. ಉಪವಾಸ ಕುಳಿತೆ.
-ಪ್ರಸನ್ನರಂಗಕರ್ಮಿ ಮತ್ತು ನಾಟಕಕಾರಗ್ರಾಮಸೇವಾಸಂಘ#SacredEconomy #Karonakuch#MonsterEconomy #GramSevaSangh
www.gramsevasangh.or | Email ID: gramsevasanghindia@gmail.com | Mobile: 998004391
