ಪವಿತ್ರ ಆರ್ಥಿಕತೆಯ ಜಾರಿಗಾಗಿ ಸತ್ಯಾಗ್ರಹವನ್ನು ತೀವ್ರಗೊಳಿಸುತ್ತಿದ್ದೇವೆ

ಗ್ರಾಮ ಸೇವಾ ಸಂಘದ ಪತ್ರಿಕಾ ಹೇಳಿಕೆ – 08.04.2020


ಏಪ್ರಿಲ್ 10, 2020, ಶುಕ್ರವಾರದಿಂದ ಪವಿತ್ರ ಆರ್ಥಿಕತೆಯ ಸತ್ಯಾಗ್ರಹವನ್ನು ತೀವ್ರಗೊಳಿಸುವ ನಿರ್ಧಾರ ಮಾಡಿದ್ದೇವೆ ನಾವು. ಅಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ದೇಶದ ಪ್ರಜೆಗಳು ರಾಷ್ಟ್ರೀಯ ಉಪವಾಸ ವ್ರತದಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಉಪವಾಸವ್ರತವು, ಗುಳೆ ಎದ್ದಿರುವ ಬಡವರ ಕಷ್ಟನಷ್ಟಗಳಿಗೆ ಸ್ಪಂದಿಸುವ ಹಾಗೂ ಆತ್ಮವಿಮರ್ಶೆಮಾಡಿಕೊಳ್ಳುವ ಸಲುವಾಗಿ ಇರುತ್ತದೆ. ಅಂದಿನಿಂದಲೇ ಆರಂಭಿಸಿ, ಸಂಘದ ಹಿರಿಯರಾದ ಶ್ರೀ ಪ್ರಸನ್ನ ಅವರು ಅನಿರ್ದಿಷ್ಟ ಅವಧಿಯವರೆಗೆ ಉಪವಾಸವ್ರತವನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ. ರಾಷ್ಟ್ರೀಯ ಉಪವಾಸವ್ರತ ಹಾಗೂ ಅದರ ಮುಂದುವರಿಕೆ ನಮ್ಮ ರಾಷ್ಟ್ರಪ್ರಜ್ಞೆಯನ್ನು ಮೀಟುವ ಒಂದು ಸಣ್ಣ ಪ್ರಯತ್ನವಾಗಿರುತ್ತದೆ.

ನಮ್ಮ ಸತ್ಯಾಗ್ರಹವು ಸಾರ್ವಜನಿಕ ಪ್ರತಿಭಟನೆಯಲ್ಲ. ಶ್ರೀ ಪ್ರಸನ್ನರವರು ಸಾವುಬರಲಿ ಎಂಬ ಹಠದಿಂದ ಉಪವಾಸ ಮಾಡುತ್ತಿಲ್ಲ. ಸಾವನ್ನು ಮುಂದೂಡುವ ಸಲುವಾಗಿ ಅವರು ಪ್ರತಿದಿನ ನೀರನ್ನು ಸೇವಿಸಲಿದ್ದಾರೆ, ಒಂದು ಹರಳು ಉಪ್ಪಿನ ಜೊತೆಗೆ ಅರ್ಧ ಚಮಚೆ ನಿಂಬೆರಸವನ್ನು ದಿನಕ್ಕೊಮ್ಮೆ ಸೇವಿಸಲಿದ್ದಾರೆ. ಉಪವಾಸದ ಮೂರನೆಯ ದಿನದಿಂದ, ರಕ್ತದ ಸಕ್ಕರೆಯ ಪ್ರಮಾಣವನ್ನು ಕನಿಷ್ಟ ಮಟ್ಟದಲ್ಲಿ ಉಳಿಸಿಕೊಳ್ಳಲೆಂದು, ದಿನಕ್ಕೆರಡು ಬಾರಿ ಜೇನು ಸೇವಿಸಲಿದ್ದಾರೆ.


ಸತ್ಯಾಗ್ರಹಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಸಂಘವು ಕಾಲಕಾಲಕ್ಕೆ ಸಾರ್ವಜನಿಕಗೊಳಿಸಲು ಬದ್ಧವಾಗಿರುತ್ತದೆ. ವ್ರತನಡೆಯುತ್ತಿರುವ ಸ್ಥಳಕ್ಕೆ ಆಗಮಿಸುವ ಹಾಗೂ ವ್ರತನಿರತರೊಡನೆ ಮಾತಿಗಿಳಿಯುವ ಪ್ರಯತ್ನವನ್ನು ದಯಮಾಡಿ ಯಾರೂ ಮಾಡಬಾರದು,ಹಾಗೂ ಜಾರಿಯಲ್ಲಿರುವ ನಿರ್ಬಂಧವನ್ನು ಯಾರೂ ಮೀರಬಾರದು. ಉಪವಾಸವ್ರತವೆಂಬುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುತ್ತದೆ, ನಾವೆಲ್ಲರೂ ಹೆಮ್ಮೆಪಡುವ ಒಂದು ಆಚರಣೆಯಾಗಿರುತ್ತದೆ. ಎಲ್ಲ ಸ್ನೇಹಿತರು, ಎಲ್ಲ ಸ್ನೇಹಪರ ಸಂಘಟನೆಗಳು ಹಾಗೂ ಎಲ್ಲ ಸ್ನೇಹಪರ ಸರಕಾರಗಳು ಉಪವಾಸವ್ರತವನ್ನು ನಿಲ್ಲಿಸುವಂತೆ ವ್ರತಾರ್ಥಿಗಳ ಮೇಲೆ ಬಲವಂತ ಹೇರಬಾರದು. ನಾವು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಒಂದೊಮ್ಮೆ ಸರಕಾರಗಳಿಗೆ ಉಪವಾಸವ್ರತವೆಂಬುದು ಕಾನೂನು ಬಾಹಿರ ಅನ್ನಿಸಿದರೆ, ನಾವೆಲ್ಲರೂ ಬಂಧನಕ್ಕೊಳಗಾಗಲು ಸಂತೋಷದಿಂದ ಸಿದ್ಧರಿದ್ದೇವೆ.

ಸತ್ಯಾಗ್ರಹದ ಹಿನ್ನೆಲೆ ಹಾಗೂ ವಿವರಣೆ

ಮಾನವ ಸಂಸ್ಕೃತಿಯು ವಿನಾಶದ ಅಂಚಿಗೆ ಬಂದು ತಲುಪಿದೆ. ನಾವು ಮರ್ಯಾದಾ ಪುರುಷ ರಾಮನ ಹೆಸರಿನಲ್ಲಿ ರಾವಣ ಸಭ್ಯತೆಯ ನಿರ್ಮಾಣ ಮಾಡುತ್ತಿದ್ದೇವೆ. ಅತ್ತ ಕ್ರೈಸ್ತರು, ಕರುಣಾಳು ಏಸುವಿನ ಹೆಸರಿನಲ್ಲಿ ಯಂತ್ರಚಾಲಿತ ಚಕ್ರಾಧಿಪತ್ಯ ಒಂದರ ನಿರ್ಮಾಣ ಮಾಡುತ್ತಿದ್ದಾರೆ. ಇತ್ತ ಮುಸಲ್ಮಾನರು, ಪ್ರವಾದಿಗಳ ಹೆಸರಿನಲ್ಲಿ ಏಕಚಕ್ರಾಧಿಪತ್ಯದ ಕನಸುಹೊತ್ತು ತಿರುಗುತ್ತಿದ್ದಾರೆ. ಜೊóರಾಸ್ತ್ರ, ಬುದ್ಧ ಇತ್ಯಾದಿ ಎಲ್ಲ ಮಹಾಪುರುಷರ ಅನುಯಾಯಿಗಳೂ ಸಣ್ಣದೊಡ್ಡ ಚಕ್ರಾಧಿಪತ್ಯಗಳ ಕನಸು ಕಾಣುತ್ತಿದ್ದಾರೆ. ಇತ್ತ ಸಾಮ್ಯವಾದಿಗಳು ಹಾಗೂ ಸಮಾಜವಾದಿಗಳ ಕನಸೂ ಕೂಡ ಭಿನ್ನವಾಗೇನಿಲ್ಲ. ಎಲ್ಲರಿಗೂ, ಎಲ್ಲ ವಿಶ್ವವನ್ನೂ, ಆವರಿಸುವ ಹಾಗೂ ಆಳುವ ಆಸೆ ಅದಮ್ಯವಾಗಿದೆ. ಸರಳವಾದ ಹಾಗೂ ಸಭ್ಯವಾದ ಸಮಾಜ ನಿರ್ಮಾಣದ ಕನಸು ಹಿನ್ನೆಲೆಗೆ ಸರಿದಿದೆ.

ಗಾಂಧೀಜಿಯವರು, ಶ್ರಮಾಧಾರಿತವಾದ ಹಾಗೂ ಗ್ರಾಮಕೇಂದ್ರಿತವಾದ ಸರಳ ಸಭ್ಯತೆಯೊಂದನ್ನು ಪ್ರತಿಪಾದಿಸಿ ಶತಮಾನವೇ ಕಳೆದುಹೋಯಿತು. ಅವರ ಜನರೇ, ಅವರ ಮರಣಾನಂತರದಲ್ಲಿ, ಅಧಿಕಾರ ರಾಜಕಾರಣದ ಮಡುವಿಗೆ ಬಿದ್ದರು ಹಾಗೂ ಗಾಂಧಿಜಿಯನ್ನೊಂದು ಅಸಂಗತ ಸಂಕೇತವಾಗಿ ಮಾಡಿಬಿಟ್ಟರು. ಗಾಂಧೀಜಿಯವರು, ಯಂತ್ರಗಳನ್ನು ನಾವು ಚಲಾಯಿಸುತ್ತಿದ್ದಂತಹ ಕಾಲಘಟ್ಟದಲ್ಲಿ ಯಂತ್ರರಹಿತ ಕೈಉತ್ಪಾದನೆಯ ಆರ್ಥಿಕತೆಯನ್ನು ಪ್ರತಿಪಾದಿಸಿದ್ದರು. ಈಗ, ಯಂತ್ರಗಳೇ ನಮ್ಮನ್ನು ಚಲಾಯಿಸುತ್ತಿವೆ …! ಹೀಗಾಗಿ ಸರಳಬದುಕಿನಲ್ಲಿ ನಂಬಿಕೆಯಿಟ್ಟಿರುವ, ಹಾಗೂ ಸರಳ ಆರ್ಥಿಕತೆಯ ಅಗತ್ಯವಿರುವ, ಸರಳಜನರು ಗಾಂಧೀಆರ್ಥಿಕತೆ ಅಸಾಧ್ಯ ಎಂಬ ಹತಾಶೆಗೆ ಸಿಲುಕಿದ್ದಾರೆ. ಈ ನಡುವೆ ಧಿಡೀರನೆ ನಮ್ಮನ್ನಾವರಿಸಿದ ಕರೋನಾ ವೈರಸ್ಸು, ರಾಕ್ಷಸ ಆರ್ಥಿಕತೆಯನ್ನು ಅನುಮಾನಾತೀತವಾಗಿ ಸೋಲಿಸಿದೆ.

ಬದನವಾಳು ಸತ್ಯಾಗ್ರಹ

2015ರ ಏಪ್ರಿಲ್ ತಿಂಗಳಿನಲ್ಲಿ ದೇಶದ ಹಲವಾರು ರಚನಾತ್ಮಕ ಸಂಘಟನೆಗಳು ಹಾಗೂ ಕಾರ್ಯಕರ್ತರು ‘ಬದನವಾಳು ಸತ್ಯಾಗ್ರಹ’ ಎಂಬ ಕಾರ್ಯಕ್ರಮದಡಿಯಲ್ಲಿ ಒಂದಾಗಿ ಸುಸ್ಥಿರ ಬದುಕಿನ ಅನಿವಾರ್ಯತೆಯನ್ನು ಜಗತ್ತಿಗೆ ಎತ್ತಿಹಿಡಿದರು. ಸುಸ್ಥಿರ ಬದುಕಿನ ಜಾರಿಗಾಗಿ ಒತ್ತಾಯಿಸಿ ಅಲ್ಲಿಂದಾಚೆಗೆ ನಡೆದ ಹಲವಾರು ಸತ್ಯಾಗ್ರಹಗಳು ರೂಪಿಸಿದವು ಪವಿತ್ರ ಆರ್ಥಿಕತೆಯ ತತ್ವವನ್ನು. ಸಂಪೂರ್ಣ ಯಂತ್ರಚಾಲಿತವಾಗಿರುವ ಇಂದಿನ ಯುಗದಲ್ಲಿ ಗಾಂಧೀಜಿಯವರ ತತ್ವವನ್ನು ಜಾರಿಗೊಳಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿದೆ ಪವಿತ್ರ ಆರ್ಥಿಕತೆಯ ತತ್ವ. ಯಂತ್ರಗಳ ಅಲ್ಪಪ್ರಮಾಣದ ಬಳಕೆ, 40% ಮೀರದಂತೆ, ಇದು ಮಾನ್ಯ ಮಾಡುತ್ತದೆ. ಆದರೆ, ಯಾವುದೇ ಉತ್ಪಾದನಾ ವ್ಯವಸ್ಥೆಯಲ್ಲಿ ಕನಿಷ್ಟ 60% ಮಾನವಶ್ರಮದ ಬಳಕೆ ಇರಲೇಬೇಕು ಎಂದು ತಾಕೀತು ಮಾಡುತ್ತದೆ.


ಸೆಪ್ಟೆಂಬರ್ 25, 2019 ರಂದು ಪವಿತ್ರ ಆರ್ಥಿಕತೆಯ ಸತ್ಯಾಗ್ರಹ ಆರಂಭವಾಯಿತು. ಸತ್ಯಾಗ್ರಹದ ಫಲಶ್ರುತಿಯಾಗಿ, ಪವಿತ್ರ ಆರ್ಥಿಕತೆ ಕುರಿತಂತೆ, ಗ್ರಾಮ ಸೇವಾ ಸಂಘವು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ, ಮಾತುಕತೆ ಫಲಪ್ರದವಾಗುತ್ತಿಲ್ಲ. ಸರಕಾರಗಳ ಮೇಲೆ ನೈತಿಕ ಒತ್ತಡ ಹೇರಿ ಅವರನ್ನು ಒಪ್ಪಿಸಬೇಕಾದರವರು ಜನತೆ ಎಂಬ ಅರಿವಾಗಿದೆ ನಮಗೆ. ಈ ಅರಿವಿನಿಂದಾಗಿ #KaronaKuch ಅರ್ಥಾತ್ “ಏನಾದರೂ ಮಾಡು” ಎಂಬ ಪ್ರಚಾರಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ನಾಳೆ 10.4.2020 ಶುಕ್ರವಾರದಂದು ಈ ಕಾರ್ಯಕ್ರಮದ ಅಂಗವಾಗಿ, ಗುಳೆ ಎದ್ದಿರುವ ಬಡವರ ಪರವಾಗಿ ಒಂದು ದಿನದ ರಾಷ್ಟ್ರೀಯ ಉಪವಾಸ ವ್ರತಕ್ಕೆ ಕರೆ ನೀಡಿದ್ದೇವೆ. ಅಲ್ಲಿಂದಾಚೆಗೆ, ಪವಿತ್ರ ಆರ್ಥಿಕತೆಯ ಸತ್ಯಾಗ್ರಹವು ಮಾಡು ಇಲ್ಲವೇ ಮಡಿ ಎಂಬ ಅರ್ಥದಲ್ಲಿ ತೀವ್ರಗೊಳ್ಳಲಿದೆ.

-ಗ್ರಾಮ ಸೇವಾ ಸಂಸಂಘ

www.gramsevasangh.org | Email ID: gramsevasanghindia@gmail.com | Mobile: 9980043911

1. Google Drive bit.ly/karonakuch

2. Social Media

If you are at Social media platforms follows at:

Facebook : @gramsevasanghindia | Twitter : @gramsevasangha  | Insta: @gramsevasanghindia  

3. Concept Notes & Articles:

About Campaign #KaronaKuch

*Few recent article*