ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ

ನಮ್ಮ ಬೇಡಿಕೆ

ಪವಿತ್ರ ಆರ್ಥಿಕ ಕ್ಷೇತ್ರಕ್ಕೆ
ಶೂನ್ಯತೆರಿಗೆ ವಿಧಿಸಬೇಕು
ರಿಫೈನಾನ್ಸ್ ಸೌಲಭ್ಯ ಒದಗಿಸಬೇಕು
ಹಾಗೂ
ಕ್ಷೇತ್ರದ ಸಮಗ್ರ ಸುಧಾರಣೆಗಾಗಿ
ಸರಕಾರವು ಸಮರೋಪಾದಿಯಲ್ಲಿ ಕೆಲಸಮಾಡಬೇಕು

ಸತ್ಯಾಗ್ರಹದ ಮಾಹಿತಿಗಾಗಿ : bit.ly/SSE_KAN
ಸಾಮಾಜಿಕ ಜಾಲತಾಣದಲ್ಲಿ : #SacredEconomy ಬಳಸಿ

ಸತ್ಯಾಗ್ರಹ ಏಕೆ?

ಪವಿತ್ರ ಆರ್ಥಿಕತೆಯನ್ನು ಜಾರಿಗೊಳಿಸಲಿಕ್ಕಾಗಿ ಗ್ರಾಮಸೇವಾಸಂಘವು ಸತ್ಯಾಗ್ರಹ-ವೊಂದನ್ನು ಆರಂಭಿಸಿದೆ. ಪವಿತ್ರ ಆರ್ಥಿಕತೆಯೆಂದರೆ ಕಡಿಮೆ ಹೂಡಿಕೆಮಾಡಿ ಹೆಚ್ಚುಜನರಿಗೆ ದುಡಿಯುವ ಮಾರ್ಗ ತೋರಿಸಬಲ್ಲ ಉತ್ಪಾದನಾ ವ್ಯವಸ್ಥೆ, ಪ್ರಕೃತಿಗೆ ಅತ್ಯಂತ ಕಡಿಮೆ ಹಾನಿಕಾರಕವಾದ ವ್ಯವಸ್ಥೆ. ವಾಲ್ಮೀಕಿ ಮುನಿಗಳು ರಾಮಾಯಣದಲ್ಲಿ ಸೂಚಿಸುವ ಪ್ರಕೃತಿತತ್ವ ಹಾಗೂ ಪುರುಷತತ್ವಗಳ ಪ್ರೀತಿರ್ಪೂವಕ ಸಹಬಾಳ್ವೆಯ ಆದರ್ಶವ್ಯವಸ್ಥೆ.

ರಾಕ್ಷಸ ಆರ್ಥಿಕತೆ ಸೋಲುತ್ತಿದೆ

ರಾಕ್ಷಸ ಆರ್ಥಿಕತೆಯು ಇಂದು ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ತನ್ನ ಗುಣ ಹಾಗೂ ಗಾತ್ರ ಎರಡರಲ್ಲೂ ಇದು ರಾಕ್ಷಸವೇ ಆಗಿದೆ. ವಿಪರ್ಯಾಸವೆಂದರೆ ರಾಕ್ಷಸ ಆರ್ಥಿಕತೆ ಇಂದು ಸೋಲತೊಡಗಿದೆ. ಮಾತ್ರವಲ್ಲ, ನಮ್ಮನ್ನು ಹಾಗೂ ನಮ್ಮ ಸುತ್ತಲಿನ ವಾತಾವರಣವನ್ನು ಸಹ ಅದು ಸೋಲಿಸತೊಡಗಿದೆ. ರಾಕ್ಷಸ ಆರ್ಥಿಕತೆಯನ್ನು ಮಣಿಸಿ ಪವಿತ್ರ ಆರ್ಥಿಕತೆಯನ್ನು ಜಾರಿ ಗೊಳಿಸಲಿಕ್ಕೆ ಇದು ಸೂಕ್ತ ಸಮಯವಾಗಿದೆ.

ರಾಕ್ಷಸರನ್ನು ಗೆಲ್ಲಿಸಬೇಕೆ?

ಗೆಲ್ಲಿಸಬಾರದು. ಆದರೆ, ವಿಶ್ವದಾದ್ಯಂತ ವಿವಿಧಸರಕಾರಗಳು ಜನರ ತೆರಿಗೆಹಣದಿಂದ ರಾಕ್ಷಸ ಆರ್ಥಿಕತೆಯನ್ನು ಬದುಕಿಸಲು ಹೆಣಗುತ್ತಿದ್ದಾವೆ. ಇದೊಂದು ದುರಂತವೇ ಸರಿ. 

ಸಣ್ಣ ಹಾಗೂ ಮಧ್ಯಮಗಾತ್ರದ ಕೈಗಾರಿಕೆಗಳು ಬಿಕ್ಕಟ್ಟಿನಲ್ಲಿರುವಾಗ, ಕೃಷಿಕ್ಷೇತ್ರ, ನೇಕಾರರು, ಕುಶಲಕರ್ಮಿಗಳು ವೃತ್ತಿ ತೊರೆದು ಪಟ್ಟಣಗಳಿಗೆ ಗುಳೆ ಹೋಗುತ್ತಿರುವಾಗ, ರಾಕ್ಷಸ ಆರ್ಥಿಕತೆಯನ್ನು ಉಳಿಸುವುದು ಅಕ್ಷಮ್ಯ ಅಪರಾಧವಾಗಿದೆ. 

ಪ್ರತ್ಯೇಕತೆ ಪವಿತ್ರವಲ್ಲ

ಆದರೇನು, ಪಾವಿತ್ಯ್ರದ ಅರ್ಥವನ್ನೇ ಬದಲು ಮಾಡಲಾಗುತ್ತಿದೆ. ಪ್ರತ್ಯೇಕತಾವಾದ, ಜಾತಿವ್ಯವಸ್ಥೆ ಹಾಗೂ ಲಿಂಗತಾರತಮ್ಯಗಳನ್ನು ಪಾವಿತ್ಯ್ರದ ಹೆಸರಿನಲ್ಲಿ ಮುಂದೊತ್ತಲಾಗುತ್ತಿದೆ.

ನಮ್ಮ ಬೇಡಿಕೆ

ಪವಿತ್ರ ಆರ್ಥಿಕ ಕ್ಷೇತ್ರಕ್ಕೆ, ಶೂನ್ಯತೆರಿಗೆ ವಿಧಿಸಬೇಕು, ರಿಫೈನಾನ್ಸ್ ಸೌಲಭ್ಯ ಒದಗಿಸಬೇಕು, ಹಾಗೂ ಕ್ಷೇತ್ರದ ಸಮಗ್ರ ಸುಧಾರಣೆಗಾಗಿ ಸರಕಾರವು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು

ಪವಿತ್ರ ಆರ್ಥಿಕತೆಯ ವೈಜ್ಞಾನಿಕ ಅಳತೆ ಸಾಧ್ಯವೇ?

ಅಳತೆಯೇ ಸಾಧ್ಯವಿರದ ಬೇಡಿಕೆಯಿದು, ಒಂದೊಮ್ಮೆ ಸರಕಾರವು ಬೇಡಿಕೆ ಈಡೇರಿಸಲು ಮನಸ್ಸು ಮಾಡಿದರೂ ಸಹ, ಈಡೇರಿಸಲಾಗದುಎಂದು ಹಲವರಿಗೆ ಅನ್ನಿಸಿದೆ. ಹಾಗೇನಿಲ್ಲ. ಖಂಡಿತವಾಗಿ ಈಡೇರಿಸಬಹುದಾದ ಬೇಡಿಕೆಯಿದು. ವಿವರಿಸುತ್ತೇವೆ.

ಪವಿತ್ರ ಆರ್ಥಿಕತೆಗೊಂದು ಮಾನದಂಡವಿದೆ

ಅದು ಹೀಗಿದೆ. ಮಾನದಂಡದ ಒಂದು ತುದಿಯಲ್ಲಿ ಸಂಪೂರ್ಣ ಕೈಉತ್ಪಾದನೆ ಹಾಗೂ ಸಂಪೂರ್ಣ ಸ್ಥಳೀಯ ಕಚ್ಚಾವಸ್ತುವಿನ ಬಳಕೆ ಇದ್ದರೆ, ಮತ್ತೊಂದು ತುದಿಯಲ್ಲಿ ಸಂಪೂರ್ಣ ಸ್ವಯಂಚಾಲಕತೆ ಹಾಗೂ ಸಂಪೂರ್ಣ ವಿದೇಶಿ ಕಚ್ಚಾಮಾಲಿನ ಬಳಕೆ ಇರುತ್ತದೆ. 

ಸ್ವದೇಶಿ ಮಿತಿ

ಸ್ವದೇಶಿಯ ಮಿತಿಯನ್ನು ನಾವು, ಸದ್ಯದ ಚಾರಿತ್ರಿಕ ಸಂದರ್ಭವನ್ನು ಗಮನ ದಲ್ಲಿರಿಸಿಕೊಂಡು, ಉತ್ಪಾದನಾ ಕ್ಷೇತ್ರದಿಂದ ಒಂದು ನೂರು ಕಿಲೋಮೀಟರುಗಳು ಎಂದು ನಿಗದಿಪಡಿಸಿದ್ದೇವೆ. ಅಲ್ಲಿಂದಾಚಿನದ್ದು ವಿದೇಶಿ ಎಂದು ಪರಿಗಣಿತವಾಗುತ್ತದೆ. ಈ ಹಿಂದೆ ಗಾಂಧೀಜಿಯವರು, ಗ್ರಾಮಸ್ವರಾಜ್ಯದ ಘೋಷಣೆ ಮಾಡುವಾಗ, ಈ ಮಿತಿಯನ್ನು ಕೇವಲ ಎಂಟು ಕಿಲೋಮೀಟರುಗಳು, ಅಥವ ಐದು ಮೈಲಿಗಳು ಎಂದು ಗುರುತಿಸಿದ್ದರು.

60-40ರ ಅನುಪಾತ

ಸದರಿ ಮಾನದಂಡದಲ್ಲಿ, 60-40ರ ಅನುಪಾತದಲ್ಲಿ ಪವಿತ್ರ ಆರ್ಥಿಕತೆಯನ್ನು ಇರಿಸಲಾಗಿದೆ. ಅರ್ಥಾತ್ ಯಾವ ಉತ್ಪಾದನಾಕ್ಷೇತ್ರವು ಕನಿಷ್ಠ ಅರವತ್ತು ಪ್ರತಿಶತ ಮಾನವಶ್ರಮವನ್ನು ಬಳಕೆ ಮಾಡುತ್ತದೆಯೋ, ಗರಿಷ್ಠ ನಲವತ್ತು ಪ್ರತಿಶತಕ್ಕೆ ಮೀರದಂತೆ ಸ್ವಯಂಚಾಲಕತೆಯನ್ನು ಬಳಕೆಮಾಡುತ್ತದೆಯೋ ಅವೆಲ್ಲವೂ ಪವಿತ್ರ ಕ್ಷೇತ್ರಗಳು ಎಂದು ಪರಿಗಣಿತವಾಗುತ್ತದೆ. ಕಚ್ಚಾ ಮಾಲಿಗೂ ಇದೇ 60-40ರ ಅನುಪಾತ ಅನ್ವಯಿಸುತ್ತದೆ. 

ಕುಸಿಯುತ್ತಿರುವ ಆರ್ಥಿಕತೆಗೆ ರಾಮಬಾಣ

ಪವಿತ್ರ ಆರ್ಥಿಕತೆಯ ಮಾನದಂಡವನ್ನು ಅನುಸರಿಸುವ ಎಲ್ಲಾ ಉತ್ಪಾದನಾ ಘಟಕಗಳಿಗೆ ಶೂನ್ಯ ತೆರಿಗೆಯ (ಜಿ.ಎಸ್.ಟಿ.) ಸೌಲಭ್ಯ ಸಿಗಬೇಕು, ರಿಫೈನಾನ್ಸಿಂಗ್ ಸೌಲಭ್ಯ ಸಿಗಬೇಕು, ಆರ್ಥಿಕ ಸುದಾರಣೆಯ ಎಲ್ಲ ಪ್ರಯತ್ನಗಳು ಈ ಕ್ಷೇತ್ರದಲ್ಲಿ ಆಗಬೇಕು ಎಂದು ನಾವು ಬಯಸುತ್ತೇವೆ. 

ಕುಸಿಯುತ್ತಿರುವ ಭಾರತದ ಆರ್ಥಿಕತೆಯನ್ನು ಮತ್ತೆ ಮೇಲೆತ್ತಿ ನಿಲ್ಲಿಸಲಿಕ್ಕೆ ಪವಿತ್ರ ಆರ್ಥಿಕತೆಯೊಂದೇ ರಾಮಬಾಣ. ಮುಂದುವರೆದ ಇತರೇ ದೇಶಗಳಿಗೆ ಹೋಲಿಸಿದರೆ ನಮ್ಮದು ಮೂಲತಃ ಸ್ಥಳೀಯ ಆರ್ಥಿಕತೆಯಾಗಿದೆ ಎಂಬ ಸಂಗತಿಯನ್ನು ನಾವು ಮರೆಯದಿರೋಣ.

ಜಾರಿಗೊಳಿಸುವ ವಿಧಾನ, ಒಂದು ಉದಾಹರಣೆ

ವಾಹನ ಉತ್ಪಾದನಾ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಸಂಘಟಿತ ವಲಯದ ದೊಡ್ಡ ಸಂಖ್ಯೆಯ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಂದೇ ಸರಕಾರವು ಈ ಕ್ಷೇತ್ರದ ಉದ್ದಿಮೆದಾರರಿಗೆ ಲಕ್ಷ ಲಕ್ಷ ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ ನೀಡಿದೆ. ಆದರೂ ನಿರೀಕ್ಷಿತ ಫಲ ಕಾಣುತ್ತಿಲ್ಲ. ಏಕೆ?

ಏಕೆಂದರೆ, ಕೆಲಸಗಾರರು ದೊಡ್ಡಸಂಖ್ಯೆಯಲ್ಲಿರುವುದು ಮಾರುತಿ, ಫೋರ್ಡ್, ಟೋಯೋಟಾ ಅಸ್ಸೆಂಬ್ಲಿ ಲೈನಿನಲ್ಲಲ್ಲ, ಅವರಿರುವುದು ಸಣ್ಣಸಣ್ಣ ಬಿಡಿಭಾಗಗಳ ಉತ್ಪಾದನಾ ಘಟಕಗಳಲ್ಲಿ. ಇಂದು ಅವು ಮುಚ್ಚತೊಡಗಿವೆ. ಉದಾಹರಣೆಗೆ ಬೆಂಗಳೂರು ನಗರದಲ್ಲಿ, ಏಷಿಯಾಖಂಡದ ಅತಿದೊಡ್ಡ ಇಂಡಸ್ಟ್ರಿಯಲ್ ಎಸ್ಟೇಟ್ ಎಂದೇ ಹೆಸರಾಗಿರುವ ಪೀಣ್ಯ ಇದೆ. ಅದು ಮುಚ್ಚತೊಡಗಿದೆ. 

ಸಂಘಟಿತ ಹಾಗೂ ಅಸಂಘಟಿತ ವಲಯಗಳ ಜಂಟಿ ಚಳುವಳಿಯಿದು

ಈ ದೇಶದ ಪೀಣ್ಯಗಳನ್ನು ಸಲಹಿ, ರಾಕ್ಷಸಆರ್ಥಿಕತೆಯನ್ನಲ್ಲ, ಎಂದು ನಾವು ಹೇಳುತ್ತಿದ್ದೇವೆ.   ಈ ಅರ್ಥದಲ್ಲಿ, ಪವಿತ್ರ ಆರ್ಥಿಕತೆಯ ಹೋರಾಟವು ಗ್ರಾಮೀಣ ಅಸಂಘಟಿತ ವಲಯ ಹಾಗೂ ಸಂಘಟಿತ ನಗರ ವಲಯಗಳ ಕೆಲಸಗಾರರ ಜಂಟಿ ಚಳುವಳಿಯೂ ಹೌದಾಗಿದೆ.

ಪವಿತ್ರ ಎಂಬ ಪದವೇಕೆ ?

ಸತ್ಯಾಗ್ರಹಕ್ಕೆ ಹಲವು ಆಯಾಮಗಳಿವೆ. ಉದ್ಯೋಗಸೃಷ್ಟಿ ಮೊದಲ ಆಯಾಮವಾದರೆ. ಪರಿಸರಸ್ನೇಹ ಹಾಗೂ ಪ್ರಕೃತಿ ರಕ್ಷಣೆ ಅದರ ಎರಡನೆಯ ಆಯಾಮ. ಸಮಾಜವ್ಯವಸ್ಥೆ ಅದರ ಮೂರನೆಯ ಆಯಾಮ. 

ಸಮಾಜಿಕ ಪಿಡುಗುಗಳಾದ ಜಾತಿಪದ್ಧತಿ ಲಿಂಗತಾರತಮ್ಯ ಇತ್ಯಾದಿಗಳನ್ನು ಹೋರಾಡುವುದು ಕೂಡ ಸತ್ಯಾಗ್ರಹದ ಉದ್ದೇಶವಾಗಿದೆ. ಪ್ರತ್ಯೇಕತೆಯ ಭಾವನೆ ಪವಿತ್ರವಲ್ಲ, ಶ್ರಮದ ಬದುಕೇ ಪವಿತ್ರವಾದದ್ದು ಎಂದು ನಾವು ಧೃಡವಾಗಿ ನಂಬುತ್ತೇವೆ.

ಶ್ರಮಪರಂಪರೆ ಹಾಗೂ ಸಂತ ಚಳುವಳಿಗಳು

ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಅಥವಾ ಸಂತ ರವಿದಾಸರ ಮುಂದಾಳತ್ವದಲ್ಲಿ ನಡೆದ ಸಂತ ಚಳುವಳಿ ಅಥವಾ ಸಂತಕಬೀರರ ಚಳುವಳಿ, ಇತ್ಯಾದಿ ಎಲ್ಲವೂ ಉದ್ಯೋಗಸೃಷ್ಟಿ ಪರಿಸರರಕ್ಷಣೆ ಹಾಗೂ ಜಾತಿನಾಶ ಮೂರೂ ಉದ್ದೇಶಗಳನ್ನೂ….. ಹೊಂದಿದ್ದವು ಎಂಬುದು ಗಮನಾರ್ಹ ಸಂಗತಿಯಾಗಿದೆ. ಕಾಯಕವೇ ಕೈಲಾಸವೆಂದರೆ, ಚಮ್ಮಾರಿಕೆಯೇ ಕೈಲಾಸ, ನೇಕಾರಿಕೆಯೇ ಕೈಲಾಸ, ಎಂದಲ್ಲವೇ?

ಮಂದಿರ ಮಾತ್ರವೇ ಪವಿತ್ರವಲ್ಲ!

ಶೂದ್ರರಿಗೆ ಪ್ರವೇಶ ನಿರಾಕರಿಸುವ ಮಂದಿರಗಳು ಪವಿತ್ರ ಹೇಗಾದಾವು? ಬೀದಿಬದಿಯಲ್ಲಿ ಕುಳಿತಿರುತ್ತಿದ್ದ ರವಿದಾಸರೂ ಪವಿತ್ರ ನಮಗೆ. ಶೂದ್ರರನ್ನು ಸಂಘಟಿಸಿದ ಬುದ್ಧ, ಅಲ್ಲಮ, ಮಂಟೇಸ್ವಾಮಿ, ಮಲೆಮಹದೇಶ್ವರ, ಜುಂಜಪ್ಪ ಇತ್ಯಾದಿ ಸಂತರೆಲ್ಲರೂ ಪವಿತ್ರ ನಮಗೆ. ಗ್ರಾಮಸೇವಾಸಂಘವು ಕಳೆದ ಹಲವಾರು ವರ್ಷಗಳಿಂದ, ಎಲ್ಲ ಶ್ರಮಜೀವಿ ಪವಿತ್ರ ಕ್ಷೇತ್ರಗಳಿಗೆ ಪಾದಯಾತ್ರೆ ನಡೆಸಿ ನಂತರವೇ ಪವಿತ್ರ ಆರ್ಥಿಕತೆಯ ಹೋರಾಟವನ್ನು ಕೈಗೆತ್ತಿ ಕೊಂಡಿರುವುದು.

ನಗರದ ಕಾರ್ಮಿಕರು ಪವಿತ್ರರಲ್ಲವೇ?

ಖಂಡಿತವಾಗಿಯೂ ಹೌದು. ಉದ್ಯೋಗ ಸೃಷ್ಟಿಯೆಂದರೆ ಗ್ರಾಮೀಣ ಉದ್ಯೋಗ ಮಾತ್ರ ಎಂಬ ಸೀಮಿತ ಅರ್ಥ ಹೊರಸೂಸುವ ಸಾಧ್ಯತೆ ಇದೆಯೆಂದೇ ನಾವು ಈ ಬಾರಿಯ ಚಳುವಳಿಯನ್ನು ಗ್ರಾಮಸ್ವರಾಜ್ಯ ಚಳುವಳಿ ಎಂದು ಕರೆಯಲಿಲ್ಲ. ಸ್ವಚ್ಚತಾ ಕಾರ್ಮಿಕರು, ಮಹಿಳಾ ಗಾರ್ಮೆಂಟ್ ಕಾರ್ಮಿಕರು, ಕಾರ್ಖಾನೆಗಳ ಯಂತ್ರಕಾರ್ಮಿಕರು, ಇತ್ಯಾದಿ ಎಲ್ಲರೂ ಇಂದು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಈ ಎಲ್ಲರನ್ನು ಒಳಗೊಂಡ ಕ್ಷೇತ್ರವನ್ನು ಪವಿತ್ರವೆಂದು ಗುರುತಿಸಿದ್ದೇವೆ ನಾವು.

ಬೇಡಿಕೆ ತೀರ ದೊಡ್ಡದಾಯಿತಲ್ಲವೇ?

ಹೌದು. ಬೇಡಿಕೆ ದೊಡ್ಡದು. ಸಣ್ಣದಿದ್ದರೆ ಛಂದವಿತ್ತು. ಆದರೇನು ಮಾಡೋಣ ಹೇಳಿ. ಇಂದಿನ ಸಂಕಷ್ಟ ದೊಡ್ಡದು. ಸಣ್ಣ ಬೇಡಿಕೆಗಳ ಹೋರಾಟಗಳು ನಿರೀಕ್ಷಿತ ಫಲ ನೀಡುತ್ತಿಲ್ಲ. ಶ್ರಮಿಕರನ್ನು ಅವು ವರ್ಗೀಕರಿಸಿ ಹರಿದು ಹಂಚಿಹೋಗುವಂತೆ ಮಾಡಿವೆ.

ಮಾಡು ಇಲ್ಲವೆ ಮಡಿ

ಮಾಡು ಇಲ್ಲವೇ ಮಡಿ ಎಂಬಂತಹ ಕಾಲಘಟ್ಟವಿದು. ಹಾಗೆಂದೇ ವಿಶ್ವದಾದ್ಯಂತ ಯುವಜನತೆ Extinction Rebellion ಎಂಬ ಹೆಸರಿನ ಶಾಂತಿಯುತ ಅಸಹಕಾರ ಚಳುವಳಿಯನ್ನು ಆರಂಭಿಸಿರುವುದು. ನಮಗೆ ತಾಳ್ಮೆಯಿದೆ. ಆಡಳಿತಗಾರರು ತಾಳ್ಮೆ ಕಳೆದು ಕೊಂಡರೇನಂತೆ, ನಾವು ಕಳೆದುಕೊಳ್ಳದಿರೋಣ. ಶಾಂತಿರೀತಿಯ ಸತ್ಯಾಗ್ರಹ ಆಚರಿಸೋಣ.

ಏನಿದರ ರಾಜಕೀಯ?

ಈ ಚಳುವಳಿಗೆ ಪಕ್ಷ ರಾಜಕಾರಣದ ಸಂಪರ್ಕವಿಲ್ಲ, ಇರಬಾರದು. ಇಷ್ಟಕ್ಕೂ, ಕೇವಲ ಪಕ್ಷ ರಾಜಕಾರಣ ಸಭ್ಯತೆಯ ಈ ಮಹಾನ್ ಬಿಕ್ಕಟ್ಟನ್ನು ಪರಿಹರಿಸಲಾರದು, ಸದ್ಯಕ್ಕಂತೂ ಪರಿಹರಿಸಲಾರದು. 

ಹಾಗೆಂದ ಮಾತ್ರಕ್ಕೆ, ಆಡಳಿತ ಪಕ್ಷವೂ ಸೇರಿದಂತೆ ಯಾವುದೇ ಪಕ್ಷದ ಯಾವುದೇ ಕಾರ್ಯಕರ್ತರನ್ನೂ ನಾವು ದೂರ ಇಡುತ್ತಿಲ್ಲ. ನೀವು ನಮ್ಮ ಜೊತೆಗೂಡಿ, ಪವಿತ್ರ ಆರ್ಥಿಕತೆಯನ್ನು ಜಾರಿಗೆ ತರುವಂತೆ ನಿಮ್ಮನಿಮ್ಮ ಪಕ್ಷಗಳ ಮೇಲೆ ನೈತಿಕಒತ್ತಡ ಹೇರಿಎಂದು ಎಲ್ಲ ಪಕ್ಷಗಳ ಎಲ್ಲ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇವೆ.

ಇದೊಂದು ನೈತಿಕ ಹೋರಾಟ

ಕೊಳ್ಳುಬಾಕರಾಗದಂತೆ ಜನರಮೇಲೆ ನೈತಿಕಒತ್ತಡ ಹೇರುವುದು ಹಾಗೂ ಪವಿತ್ರಪದಾರ್ಥ ಗಳನ್ನು ಮಾತ್ರವೇ ಬಳಸುವಂತೆ ಅವರನ್ನು ಉತ್ತೇಜಿಸುವುದು ಈ ಸತ್ಯಾಗ್ರಹದ ಉದ್ದೇಶವಾಗಿದೆ.

ಪವಿತ್ರ ಆರ್ಥಿಕತೆಯ ಪರವಾಗಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರಕಾರಗಳ ಮೇಲೆ ಸಹ ನಾವು ನೈತಿಕ ಒತ್ತಡವನ್ನು ಹೇರುತ್ತಿದ್ದೇವೆ.

ಗ್ರಾಮ ಸೇವಾ ಸಂಘ ಎಂದರೆ ಯಾರು?

ನಾವು ಕಾರ್ಮಿಕ ಸಂಘಟನೆಯಲ್ಲ. ಅಥವಾ ಸತ್ಯಾಗ್ರಹದ ಮೂಲಕ ಅಧಿಕಾರ ಹಿಡಿಯಬೇಕು ಎಂಬ ಹಂಬಲವೂ ನಮಗಿಲ್ಲ. ಗ್ರಾಮಸೇವಾಸಂಘವು ರಚನಾತ್ಮಕ ಕಾರ್ಯ ಮಾಡುತ್ತಿರುವ ವಿವಿಧ ಸಂಘಟನೆಗಳ ಒಕ್ಕೂಟವಾಗಿದೆ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಲಿ ಸುತ್ತಲ ಪರಿಸರವೂ 

ನಳನಳಿಸಿ ಬೆಳೆಯಲಿ ಎಂಬುದಷ್ಟೇ ನಮ್ಮ ಆಶಯವಾಗಿದೆ. ಒಮ್ಮೆ ಆಶಯ ಕೈಗೂಡಿತೆಂದರೆ ನಾವು ನಮ್ಮನಮ್ಮ ರಚನಾತ್ಮಕ ಕಾರ್ಯಗಳಿಗೆ ಹಿಂದಿರುಗುವವರಿದ್ದೇವೆ.

ಎಲ್ಲಿಯೇ ಇರಿ, ಅಲ್ಲಿಯೇ ಸತ್ಯಾಗ್ರಹ ಮಾಡಿ

ಆದರೆ ಸಂಯಮದಿಂದ ಸತ್ಯಾಗ್ರಹ ಮಾಡಿ, ಪ್ರೀತಿಯಿಂದ ಸತ್ಯಾಗ್ರಹ ಮಾಡಿ. ನೀವು ಸಿಟ್ಟಾದರೆ ನೀವು ಬೈದಾಡಿದರೆ ಅಥವಾ ನಿಮ್ಮ ಆಯ್ಕೆಯ ರಾಜಕೀಯ ಪಕ್ಷಕ್ಕಾಗಿ ಈ ವೇದಿಕೆಯನ್ನು ಬಳಸಿದರೆ ನಾವು ನಿಮ್ಮೊಂದಿಗಿರುವುದಿಲ್ಲ ಎಂಬುದನ್ನು ಮರೆಯದಿರಿ. ನಾವು ಜನರೊಂದಿಗಿರಬಯಸುತ್ತೇವೆ, ಪ್ರಕೃತಿಯ ಜೊತೆಗೆ ಇರಬಯಸುತ್ತೇವೆ.

ಇತರರು ಸಿಟ್ಟಾದರೆ, ನಾನೇನು ಮಾಡಲಿ?

ಸಿಟ್ಟು ಒಂದು ರೋಗ ಅದು ಇದೆ. ಸಿಟ್ಟಿನ ರೋಗವನ್ನು ನಿವಾರಿಸದೆ ಸತ್ಯ ಕಾಣಿಸದು. ಸಿಟ್ಟನ್ನು ಸಹಿಸಿರಿ, ಆದರೆ ಇತರರು ನಿಮ್ಮ ಸಿಟ್ಟನ್ನು ಸಹಿಸುವಂತೆ ಮಾಡದಿರಿ.

ಸರಕಾರಗಳ ನಿಲುವು

ಉದ್ಯೋಗ ನೀಡುವ ಬಗ್ಗೆ, ಪರಿಸರ ರಕ್ಷಿಸುವ ಬಗ್ಗೆ, ಸರಕಾರಗಳು ವಿಪರೀತ ಮಾತನಾಡುತ್ತವೆ. ಆದರೆ ಕೃತಿಯಲ್ಲಿ ತದ್ವಿರುದ್ಧ ಮಾಡುತ್ತವೆ. ದೊಡ್ಡ ಉದ್ಯಮಿಗಳಿಗೆ ಹಣ ನೀಡುತ್ತವೆ. ದೊಡ್ಡ ಉದ್ಯಮಿಗಳೋ ತಮ್ಮನ್ನು ಇನ್ನೂ ದೊಡ್ಡವರಾಗಿಸಿಕೊಳ್ಳುವತ್ತ, ವಿಶ್ವವನ್ನೇ ಯಾಂತ್ರೀಕರಿಸುವತ್ತ ಗಮನ ಹರಿಸಿದ್ದಾರೆ. ಕೆಲಸ ಕೊಲ್ಲುತ್ತಿದ್ದಾರೆ, ಪರಿಸರ ಹಾಳುಗೆಡವುತ್ತಿದ್ದಾರೆ, ಅವರು.

ಗ್ರೇಟಾ ಥನ್‍ಬರ್ಗ್

ಸ್ವೀಡನ್ನಿನ ಈ ಹುಡುಗಿ ವಿಶ್ವದ ರಾಜಕಾರಣಿಗಳು ಹಾಗೂ ಉದ್ಯಮಪತಿಗಳನ್ನು ಕೇಳುತ್ತಿದ್ದಾಳೆ, “ನಿಮ್ಮ ಲಾಭಕ್ಕಾಗಿ ನನ್ನ ಭವಿಷ್ಯವನ್ನೇಕೆ ಮಣ್ಣು ಮಾಡುತ್ತಿದ್ದೀರಿ, ವಾತಾವರಣವನ್ನೇಕೆ ಹಾಳುಗೆಡುವುತ್ತಿದ್ದೀರಿ”. ನಾವು ಸಹ ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇವೆ, ಆದರೆ ಹೆಚ್ಚು ನಿರ್ದಿಷ್ಟವಾಗಿ ಕೇಳುತ್ತಿದ್ದೇವೆ. ಪವಿತ್ರ ಆರ್ಥಿಕತೆಯೊಂದೇ ವಾತಾವರಣವನ್ನು ರಕ್ಷಿಸಲಿಕ್ಕಿರುವ ದಾರಿ ಎಂಬ ಉತ್ತರವನ್ನು ನಾವು ಸೂಚಿಸುತ್ತಿದ್ದೇವೆ.

ಸತ್ಯಾಗ್ರಹದ ಘೋಷಣೆಗಳು

ಕೆಲಸಕೊಡಿ… ಕೆಲಸಕೊಡಿ…!

ಹಸಿರನ್ನು ಹಸಿರಾಗಿ ಉಳಿಸಬಲ್ಲ ಕೆಲಸ ಕೊಡಿ…!

ಕೆಲಸಕೊಡಿ… ಕೆಲಸಕೊಡಿ…!

ಸಭ್ಯತೆಯನ್ನು ಸಭ್ಯವಾಗಿ ಉಳಿಸಬಲ್ಲ ಕೆಲಸಕೊಡಿ..!

ಕೆಲಸಕೊಡಿ… ಕೆಲಸಕೊಡಿ…!

ಕೆಲಸಗಳನ್ನೇ ಕೊಲ್ಲದಿರುವಂತಹ ಕೆಲಸಗಳನ್ನು ಕೊಡಿ..!

ಕೆಲಸಕೊಡಿ… ಕೆಲಸಕೊಡಿ…!

ಗ್ರಾಮಗಳನ್ನು ನಾಶಮಾಡದಿರುವಂತಹ ಕೆಲಸ ಕೊಡಿ..!

ಕೆಲಸಕೊಡಿ… ಕೆಲಸಕೊಡಿ…!

ಭೂಮಿ ಬಿಸಿಯಾಗದಿರುವಂತಹ ಕೆಲಸ ಕೊಡಿ..!

ಕೆಲಸಕೊಡಿ… ಕೆಲಸಕೊಡಿ…!

ನೆಲ ಜಲ ಜೀವ ಜಂತುಗಳು ನರಳದಿರುವಂತಹ ಕೆಲಸ ಕೊಡಿ..!

ಕೆಲಸಕೊಡಿ… ಕೆಲಸಕೊಡಿ…!

ಜನರನ್ನು ಒಟ್ಟಾಗಿ ಉಳಿಸಬಲ್ಲ ಕೆಲಸ ಕೊಡಿ…!

ಕೆಲಸಕೊಡಿ… ಕೆಲಸಕೊಡಿ…!

ಬನ್ನಿ

ಒಟ್ಟಾಗಿ ಸತ್ಯಾಗ್ರಹ ಮಾಡೋಣ….!

ಗಾಂಧಿ-ಅಂಬೇಡ್ಕರ್ ಸತ್ಯಾಗ್ರಹವಿದು….!

ಗ್ರಾಮೀಣರು ಹಾಗೂ ನಗರಜೀವಿಗಳ ಜಂಟಿ ಸತ್ಯಾಗ್ರಹವಿದು….!

ಎಲ್ಲ ಪರಿಸರಪ್ರಿಯರ ಜಂಟಿ ಸತ್ಯಾಗ್ರಹವಿದು….!

ಹೆಣ್ಣುಮಕ್ಕಳ ಶಾಂತಿಯುತ ಸತ್ಯಾಗ್ರಹವಿದು….!

ಪ್ರತ್ಯೇಕತೆಯನ್ನು ಮೀರಿನಿಲ್ಲುವ ಸತ್ಯಾಗ್ರಹವಿದು….!

ಯುವಜನತೆಯ ಸತ್ಯಾಗ್ರಹವಿದು….!

ಗ್ರಾಮ ಸೇವಾ ಸಂಘ

GramSevaSanghIndia@gmail.com | +91 9980043911