ನಾನು ಒಂದು ಅಭಿವ್ಯಕ್ತಿ, ನನ್ನನು ಉಳಿಸಿ!

ಪತ್ರಿಕಾ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ 

ಪ್ರತಿಭಟನೆಯ ವರದಿ

12 ನೇ ಮಾರ್ಚ್ 2019 ಸಂಜೆ 5:0 ಕ್ಕೆ | ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗಎಂ ಜಿ ರಸ್ತೆಬೆಂಗಳೂರು

ಸರಕಾರದ ಕಾರ್ಯವೈಖರಿ, ಯೋಜನೆಗಳು ಮತ್ತು ತಪ್ಪುಗಳನ್ನು ಚರ್ಚಿಸುವ ವ್ಯಕ್ತಿ, ಸಮುದಾಯ ಮತ್ತು ಗುಂಪುಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ತೀವ್ರವಾದ ಆಕ್ರಮಣವನ್ನು ವಿರೋಧಿಸಿ ನಾಡಿನ ಹೋರಾಟಗಾರರು, ಕಲಾವಿದರು, ಲೇಖಕರು ಗ್ರಾಮ ಸೇವಾ ಸಂಘದ ಅಡಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ ಎಸ್ ದೊರೆಸ್ವಾಮಿ ಅಯ್ಯಂಗಾರ್, ಲೇಖಕ ಬೋಳುವಾರು ಮೊಹಮ್ಮದ್ ಕುಂಞ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಚಿತ್ರನಟ ಹಾಗೂ ನಿರ್ದೇಶಕ ಬಿ ಸುರೇಶ್, ಪತ್ರಕರ್ತರಾದ ಸುಗತ ಶ್ರೀನಿವಾಸರಾಜು, ಚಿತ್ರ ನಟ ಪ್ರಕಾಶ್ ರೈ, ಕಲಾವಿದೆ ಗೌರಿ ದತ್, ಗ್ರಾಮ ಸೇವಾ ಸಂಘದ ಮಾರ್ಗದರ್ಶಕರಾದ ಜೆ ಕೆ ಸುರೇಶ್, ಶಾಮಲಾ ದೇವಿ, ಜಿ.ಎಸ್.ಆರ್. ಕೃಷ್ಣನ್, ಸನತ್ ಕುಮಾರ್ ಹಾಗೂ ಕಾರ್ಯದರ್ಶಿ ಅಭಿಲಾಷ್ ಹಾಗೂ ಫಣೀಶ್ ಇನ್ನಿತರ ಹೋರಾಟಗಾರರು ಭಾಗಿಯಾಗಿದ್ದರು.

ಈ ಸಂಧರ್ಭದಲ್ಲಿ ಕೆಳಗಿನಂತೆ ಗಣ್ಯರು ಮಾತನಾಡಿದರು:

B Suresh, Actor, Filmmaker

ಬಿ.ಸುರೇಶ್ :   ಕಳೆದ ಕೆಲವು ದಿನಗಳಿಂದ ಏನನ್ನು ಎದುರಿಸುತ್ತಿದ್ದೆವೆಯೋ ಅದು 1975ರ ತುರ್ತು ಪರಿಸ್ಥಿತಿಯ ನಡವಳಿಕೆ. ಸರ್ಕಾರದ ನೀತಿ, ಕಾಯಿದೆಗಳನ್ನು ಅದರ ಒಳಿತು ಕೆಡಕುಗಳ ಬಗ್ಗೆ ವಿಶ್ಲೇಷಿಸಿದರೆ, ಕಲಾವಿದರು ವ್ಯಂಗ್ಯಚಿತ್ರ ಬರೆದರೆ, ಅವರ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್ ಮಾಡುವುದು, ಅವರನ್ನು ಜೈಲಿಗೆ ಹಾಕುವ ಸಂಗತಿ, ಆ ದೇಶಕ್ಕೆ ಬಂದಿರುವ ಖಾಯಿಲೆಯ ಸೂಚನೆ. ಈ ದೇಶಕ್ಕೆ ಒಂದು ಕ್ಯಾನ್ಸರ್ ಕಾಯಿಲೆ ಬಂದು ಬಡೆದಿದೆ!
ವ್ಯಂಗ್ಯಚಿತ್ರಕಾರ ಪಿ ಮೊಹಮ್ಮದ್ ಅವರ ಮೇಲೆ ಮುಗಿಬಿದ್ದ ರೀತಿ, ರವಿಕುಮಾರ್ ಅವರು ಅನುಭವಿಸುತ್ತಿರುವುದು, ಹಿಂದೂ ಪತ್ರಿಕೆಯ ಎನ್. ರಾಮ್ ಅವರ ವಿಷಯದಲ್ಲಿ ಸರ್ಕಾರ ಆಡುತ್ತಿರುವ ಮಾತು ಇವೆಲ್ಲವೂ 1975 ರ ತುರ್ತು ಪರಿಸ್ಥಿತಿ ಸಮಯದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಮೇಲೆ ನಡೆದ ದಾಳಿಯ ರೀತಿಯದಾಗಿವೆ.
ಸಾರ್ವಜನಿಕರು ಈಗ ಎಚ್ಚೆತ್ತುಕೊಂಡು ಇದನ್ನು ಸತತವಾಗಿ ವಿರೋಧಿಸುವ ಮೂಲಕ ನಮ್ಮ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಿ ಉಳಿಸಿಕೊಳ್ಳಬೇಕಾಗಿದೆ. ಈ ರೀತಿಯಾಗಿ ಮಾತನಾಡುತ್ತಿರುವ ನಮ್ಮನ್ನು ಬಂಧಿಸಿ ಕೂರಿಸಬಹುದು, ಆಗ ನಮ್ಮ ನಂತರದ ಜನ ಈ ಮಾತನ್ನು ಹೇಳಬೇಕು. ಇದು ನಿರಂತರವಾಗಿ ನಡೆಯ ಬೇಕಾದ ಹೋರಾಟ.

Mudnakudu Chinnaswamy, Poet, Writer

ಮೂಡ್ನಾಕೂಡು ಚಿನ್ನಸ್ವಾಮಿ: ವೋಲ್ಟೇರ್ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿದ ಮಾತು ಇಂದಿಗೆ ಅತ್ಯಂತ ಪ್ರಸ್ತುತ. ನಾನು ನಿಮ್ಮ ಮಾತನ್ನು ಒಪ್ಪದೇ ಇರಬಹುದು, ಅದನ್ನು ಹೇಳುವ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ, ಅದು ನಿನ್ನ ಜೀವಮಾನದ ಹಕ್ಕು. ಇತೀಚೆಗೆ ಲಖನೌನ ದಲಿತ ಪ್ರೊಫೆಸರ್ ರವಿಕಾಂತ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಡಿದ ಮಾತಿಗೆ, ಅವರಿಗೆ ನೀಡಿದ್ದ ಸಾಹಿತ್ಯದ ಪ್ರಶಸ್ತಿಯನ್ನು ಹಿಂಪಡೆಯಲಾಗಿದೆ. ಅಲ್ಲಿನ ಎಲ್ಲಾ ಸರ್ಕಾರಿ ನೌಕರರು ಸರ್ಕಾರದ ಈ ನಡೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಈ ರೀತಿಯ ಶೋಚನೀಯ ಸ್ಥಿತಿಗೆ ನಾವು ತಲುಪ್ಪಿದ್ದೇವೆ ನಾವು. ಪತ್ರಿಕಾ ಸ್ವತಂತ್ರ ಅಭಿವ್ಯಕ್ತಿ ಸ್ವತಂತ್ರ ಗಳು ಇರದೇ ಇರುವ ಪ್ರಭುತ್ವ ಪ್ರಜಾಪ್ರಭುತ್ವ ಅಲ್ಲ!

H S Doreswamy, Freedom Fighter, Activist

ಹೆಚ್ ಎಸ್ ದೊರೆಸ್ವಾಮಿ: ಈಗ ಒಂದು ಸಂಘಟನೆ ಮಾಡಿದರೆ, ಒಂದು ವಿಚಾರ ಜನರಿಗೆ ಹೇಳಿದರೆ, ಒಂದು ಸಭೆ ಸಮಾರಂಭದ ಮೂಲಕ ಸರಕಾರವನ್ನು ವಿರೋಧಿಸಿದರೆ ಅದು ತಪ್ಪು ಎಂದು ಸರಕಾರಗಳು ವರ್ತಿಸುತ್ತಿವೆ.
ಪತ್ರಿಕಾ ರಂಗದಲ್ಲಿ ಇನ್ವೆಸ್ಟಿಗೇಷನ್ ಜರ್ನಲಿಸಂ (ತನಿಖಾ ಪತ್ರಿಕೋದ್ಯಮ) ಮುಖಾಂತರ ಕೆಲವು ವ್ಯಕ್ತಿ ಅಥವಾ ಸರ್ಕಾರಗಳು ಲೋಪಗಳನ್ನು ಎಸಗಿದ ಸಂಧರ್ಭದಲ್ಲಿ ಅದನ್ನು ಬಯಲಿಗೆಳೆಯಲು ರಹಸ್ಯ ದಾಖಲೆಗಳನ್ನು ಬಯಲಿಗೆಳೆಯ ಬೇಕಾಗುತ್ತದೆ. ಅದು ಪತ್ರಿಕಾ ಧರ್ಮ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅದು ಅತ್ಯಗತ್ಯ. ಮಾಹಿತಿಯು ಸತ್ಯ ವಾಗಿದ್ದಲ್ಲಿ ಅದನ್ನು ಅವರ ಪತ್ರಿಕಾ ಧರ್ಮದ ಪ್ರಕಾರ ಪಡೆದಿದ್ದಲ್ಲಿ, ಮೂಲವನ್ನು ಗೌಪ್ಯವಾಗಿಡುವುದು ಪತ್ರಿಕಾ ವೃತ್ತಿಯ ಧರ್ಮ.

ದಿ ಹಿಂದೂ The Hindu ಪತ್ರಿಕೆ ಯವರು ಒಂದು ದೊಡ್ಡ ಕೆಲಸ ಮಾಡಿದ್ದಾರೆ, ಅವರು ಹೇಳುತ್ತಿರುವುದು ಸತ್ಯವಾಗಿದಲ್ಲಿ ಅವರು ತಮ್ಮ ಮಾಹಿತಿಯ ಮೂಲವನ್ನು ಬಹಿರಂಗ ಪಡಿಸಬೇಕಾಗಿಲ್ಲ.

ಸುಗತ ಶ್ರೀನಿವಾಸರಾಜು: ಪತ್ರಕರ್ತರ ವಿರುದ್ಧ ಅನೇಕ ಕಾನೂನುಗಳನ್ನು ಇತೀಚಿನ ದಿನಗಳಲ್ಲಿ
ದುರುಪಯೋಗಗೊಳಿಸಲಾಗುತ್ತಿದೆ. ಇದು ಪತ್ರಕರ್ತರ ಧ್ವನಿಯನ್ನು ಹತ್ತಿಕುವ ಪ್ರಯತ್ನ, ಅಫೀಷಿಯಲ್ ಸೀಕ್ರೆಟ್ ಆಕ್ಟ್ ಅನ್ನು ದಿ ಹಿಂದೂ ಪತ್ರಿಕೆಯ ಪ್ರಕರಣದಲ್ಲಿ ಸರ್ಕಾರ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಿರುವುದು ನಮಗೆ ತಿಳಿದೇ ಇದೇ. ಆದರೆ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅನ್ನೂ ಮಣಿಪುರ್ ನ ಇಂಫಾಲ್ ದ ಪತ್ರಕರ್ತನ ಮೇಲೆ ದುರುಪಯೋಗ ಮಾಡಿ ಇನ್ನು ಸಹ ಕಿಶೋರೆಚಂದ್ರ ವನ್ಗ್ಖೆಮ್ ಅವರನ್ನು ಜೈಲಿನಿಂದ ಬಿಡುಗಡೆಮಾಡಿಲ್ಲ, ಅಲ್ಲದೆ ರಾಷ್ಟ್ರ ದ್ರೋಹದ ಕಾಯಿದೆಯನ್ನು ಇತೀಚೆಗೆ ಹೆಚ್ಚು ದುರುಪಯೋಗ ಮಾಡಲಾಗಿದೆ.

Sugata Srinivasaraju, Prominent Journalist, Writer

ಇತೀಚೆಗೆ ನಡೆದ ಎಡಿಟರ್ಸ್ ಗಿಲ್ಡ್ ಮೀಟಿಂಗ್ ನಲ್ಲಿ ನಾನಿದ್ದೆ ಅಲ್ಲಿ ನಾವು Decriminalizing content ನ ಬಗ್ಗೆ ರೆಸಲ್ಯೂಷನ್ ತೆಗೆದು ಕೊಂಡಿದ್ದೇವೆ. ಶಿಲಾಂಗ್ ಟೈಮ್ಸ್ ನ ಎಡಿಟರ್ ಅನ್ನು ಇತೀಚೆಗೆ ಈ ರೀತಿಯಾಗಿ ಅಲ್ಲಿನ ಹೈ ಕೋರ್ಟ್ ಅವರಿಗೆ ಕ್ರಿಮಿನಲ್ ಕಂಟೆಂಪ್ಟ್ ಆಫ್ ಕೋರ್ಟ್ ನ ಪ್ರಕಾರ ಜುಲುಮಾನವನ್ನು ಹಾಕಿರುವುದನ್ನು ನಾವು ನೋಡಬಹುದು. ಅಲ್ಲಿನ ನ್ಯಾಯಮೂರ್ತಿಗಳು ನಿವೃತ್ತರಾದ ಮೇಲೆ ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಪ್ರಶ್ನಿಸಿದರೆ ಅವರ ವಿಷಯವೇ ಅವಿಧೇಯತೆ ಎಂದು ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.
ಅನೇಕ ದೇಶಗಲ್ಲಿ ಈ ರೀತಿಯ ಕಾಲೋನಿಯಲ್ ಕಾನೂನುಗಳನ್ನು ತೆಗೆದು ಹಾಕಲಾಗಿದೆ ಆದರೆ ನಮ್ಮ ದೇಶದಲ್ಲಿ ಅದನ್ನು ಪತ್ರಕರ್ತರು ಹಾಗೂ ಹೋರಾಟಗಾರರನ್ನು ಹಿಂಸಿಸಲು ಬಳಸಲಾಗುತ್ತಿದೆ.
ಯಾವುದೇ ಸರ್ಕಾರ ಬಂದಾಗಲೂ ಈ ರೀತಿಯ ಅಚಾತುರ್ಯಗಳು ನಡೆದಿವೆ. ಇದು ಚುನಾವಣೆಯ ಸಮಯವಾದ್ದರಿಂದ ನಾವು ಈ ರೀತಿಯ ದುರುಪಯೋಗದ ಬಗ್ಗೆ ಮತ್ತಷ್ಟು ಮಾತನಾಡಿ ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ರೀತಿಯ ಕಾನೂನುಗಳಿಂದ ನಮ್ಮ ಹಕ್ಕುಗಳಿಗೆ ರಕ್ಷಣೆ ಒದಗಿಸುವ ಪ್ರಸ್ತಾವಗಳನ್ನು ಮುಂದಿಡಬೇಕಾಗಿ ನಾವು ಕೇಳಬೇಕಿದೆ.

Prakash Rai, Veteran Actor

ಪ್ರಕಾಶ್ ರೈ: ನಾವು ಇಂದು ಯಾವ ಪರಿಸ್ಥಿತಿಗೆ ತಲುಪ್ಪಿದ್ದೇವೆ ಎಂದರೆ, ಯಾವ  ಚಾನೆಲ್ ಹಾಕಿದರೆ ಅದು ಯಾವ ಪಕ್ಷವೆಂದು ತಿಳಿಯುತ್ತದೆ, ಯಾವ ಪತ್ರಿಕೆ ಅಂತ ಹೇಳಿದರೆ ಅದು ಯಾವ ಪಕ್ಷವೆಂದು ತಿಳಿಯುತ್ತದೆ. ಸುಳ್ಳು ಸಾರ ಸಗಟಾಗಿ ಹೇಳಲಾಗುತ್ತಿದೆ, ವಿಕ್ರಮ್ ಬೇತಾಳನ ಕಥೆಯಲ್ಲಿ ಒಂದು ಸುಳ್ಳು ಹೇಳಿದರೆ ತಲೆ ಸಾವಿರ ಹೋಳಾಗುತ್ತದೆ ಎಂದು ಹೇಳುತ್ತಿದ್ದೆವು. ಆದರೆ ಈಗ ಒಂದು ಸುಳ್ಳು ಹೇಳಿದರೆ ಸಾವಿರ ವೋಟ್ ಆಗುತ್ತದೆ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

Bolwar mahammad Kunhi, Writer

 ರಫೆಲ್ ಪ್ರಕರಣದಲ್ಲಿ ಖಡತಗಳನ್ನು ಕಾಪಾಡಿಕೊಳಲಾಗದ ಸರ್ಕಾರ, ಪತ್ರಿಕಾ ಧರ್ಮ ಪಾಲಿಸಿ ಕೆಲಸ ಮಾಡುವವರನ್ನು ಕ್ರಿಮಿನಲ್ ಗಳು ಎಂದು ಹೇಳುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವುದು ಎಂದರೆ ಇದೇ. ಆದರೆ ಜನ ನೋಡುತ್ತಿದ್ದಾರೆ ಈ ರೀತಿಯ ಶಕ್ತಿಗಳು ಮೀತಿ ಮೀರಿದಾಗ ಪ್ರಗತಿಪರರು, ಕಲಾವಿದರು ಇತಿಹಾಸದಲ್ಲಿ ಎದ್ದು ನಿಂತಿದ್ದಾರೆ ಹಾಗೂ ನಿಲ್ಲುತ್ತಾರೆ. ಜನರ ಮನಃಸಾಕ್ಷಿ ಇನ್ನೂ ಜೀವಂತವಾಗಿದೆ, ಇದು ಸಣ್ಣ ಧ್ವನಿಯಾಗಿದ್ದರೂ ಸತ್ಯದ ಧ್ವನಿಯಾಗಿದೆ ಆದ್ದರಿಂದ ಇದು ಜೋರಾಗಿ ಕೇಳಲಿದೆ.

ಗ್ರಾಮ ಸೇವಾ ಸಂಘ

Facebook.com/graamasevasangha | @gramasevasangha

Mobile: 9980043911 | www.gramsevasangh.org