ಮದ್ಯವ್ಯಸನ: ಒಂದು ಸಾಮಾಜಿಕ ಪಿಡುಗು – ವಿಚಾರ ಸಂಕಿರಣ

23 ಫೆಬ್ರವರಿ 2019 ಶನಿವಾರ ಬೆಳಗ್ಗೆ 10: 30 – ಮಧ್ಯಾಹ್ನ 2:0

ಕಸ್ತೂರ್ಬಾ ಸಭಾಂಗಣ, ಗಾಂಧಿ ಭವನ, ಬೆಂಗಳೂರು – 01

ದೇಶಾದ್ಯಂತ ಲಕ್ಷಾಂತರ ಬಡ ಕುಟುಂಬಗಳನ್ನು ವಿನಾಶದ ಅಂಚಿಗೆ ತಳ್ಳುತ್ತಿರುವ ಮದ್ಯವ್ಯಸನವು ಸಾಮಾಜಿಕ ದುರಂತಗಳ ಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿದೆ. “ಕುಡಿತವು ಅನಿವಾರ್ಯವಾದ್ದರಿಂದ ನಾವೇ ಅದರ ಬೇಡಿಕೆಯನ್ನು ಪೂರೈಸುವೆವು” ಎಂಬ ಅನುಕೂಲದ ವಾದವನ್ನು ಚುನಾಯಿತ ಸರಕಾರಗಳೇ ಅನುಸರಿಸಿರುವಾಗ ಕರವಸೂಲಿ, ಲಂಚಗಳ ಆಧಾರದ ಮೇಲೆ ಹೆಂಡದ ದಂಧೆಯು ನಿಂತಿರುವುದು ಆಶ್ಚರ್ಯವೇನಲ್ಲ. ಕಾನೂನಿನ ಚೌಕಟ್ಟಿನೊಳಗೇ ಮದ್ಯದ ಉದ್ದಿಮೆ ಮತ್ತಷ್ಟು ವ್ಯವಸ್ಥಿತವಾಗುತ್ತಿದ್ದಂತೆಯೇ ಈಚಿನ ವರ್ಷಗಳಲ್ಲಿ ಅದರ ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕ ದುಷ್ಪರಿಣಾಮಗಳು ಕೂಡ ಮಿತಿಮೀರಿ ಹೋಗುತ್ತಲೇ ಇವೆ.

ಕಳೆದೆರಡು ವರ್ಷಗಳಿಂದ ಹೆಂಡದ ವರಮಾನವನ್ನು ಮತ್ತೂ ಹೆಚ್ಚಿಸಲು ರಾಜ್ಯ ಸರಕಾರವು ಸಾವಿರಾರು ಹೊಸ ಅಂಗಡಿಗಳಿಗೆ ಮದ್ಯ ಮಾರಾಟದ ಪರವಾನಗಿ ಕೊಟ್ಟು, ಜೊತೆಗೇ ಪ್ರತಿ ಅಂಗಡಿಯ ಮದ್ಯಮಾರಾಟದ ಕನಿಷ್ಠ ಮಿತಿಯನ್ನು ಹಿಗ್ಗಿಸಿ ಹೆಂಡದ ಹೊಳೆಯನ್ನೇ  ಹರಿಸಿದೆ. ಕನಿಷ್ಠ ಮಾರಾಟ ಮಿತಿಯನ್ನು ತಲುಪಲು ಮದ್ಯ ಮಾರುವರು ವಾಮಮಾರ್ಗವನ್ನು ಉಪಯೋಗಿಸಲೂ ಮುಂದಾಗಿ ಸ್ವೇಚ್ಛೆಯಿಂದ ಹೆಂಡದ ಮಾರಾಟವನ್ನು ಹೆಚ್ಚಿಸುತ್ತಿದ್ದಾರೆ.

ಬಡವರಲ್ಲಿ  ಮದ್ಯವ್ಯಸನವು ಮೋಜಿನ ಆಯ್ಕೆಯಾಗಿರದೇ ಕುಟುಂಬದಲ್ಲಿನ ಪರಸ್ಪರ ಸಂಬಂಧಗಳನ್ನು ಒಡೆದು, ತುತ್ತು ಊಟಕ್ಕೂ ಕಂಟಕವಾಗಿ, ರೋಗಗಳನ್ನು ಹೆಚ್ಚಿಸಿ, ಮಕ್ಕಳ ಭವಿಷ್ಯವನ್ನು ಇಲ್ಲವಾಗಿಸುವ ಇತ್ಯಾದಿಯಾಗಿ ದುಷ್ಪರಿಣಾಮಗಳನ್ನು ಉಂಟುಮಾಡುವುದು ಎಲ್ಲರಿಗೂ ತಿಳಿದಿರುವ ಸತ್ಯವೇ.

ಕಳೆದ ಜನವರಿ ತಿಂಗಳಲ್ಲಿ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆಯೊಂದರ ಮೂಲಕ ಗ್ರಾಮೀಣ ಮಹಿಳೆಯರು ಈ ಪಿಡುಗಿನಿಂದಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು ಎತ್ತಿ ತೋರಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ನಮ್ಮೆಲ್ಲರ ಸಾಕ್ಷಿಪ್ರಜ್ಞೆಯನ್ನು ಕೂಡ ಹರಿತಗೊಳಿಸಿದ್ದಾರೆ. ಆಶ್ಚರ್ಯವೆಂದರೆ ಇಂತಹ ದೊಡ್ಡ ಪ್ರತಿಭಟನೆ ಮತ್ತು ಅಹವಾಲುಗಳ ನಡುವೆಯೂ ಕರ್ನಾಟಕ ಸರ್ಕಾರವು ಮೊನ್ನೆ ಮಂಡಿಸಿದ ಆಯ-ವ್ಯಯ ಪಟ್ಟಿಯಲ್ಲಿ ಈ ವರ್ಷದ ಅಬಕಾರಿ ತೆರಿಗೆ ಸಂಗ್ರಹಣೆಯ ಗುರಿಯನ್ನು 21,000 ಕೋಟಿ ರೂಪಾಯಿಗಳಿಗೆ (ಅಂದರೆ ಕಳೆದ ವರ್ಷದ ಹೋಲಿಕೆಯಲ್ಲಿ 16% ಹೆಚ್ಚಳ) ಏರಿಸಿದೆ.

ಈ ಸನ್ನಿವೇಶದಲ್ಲಿ ಮದ್ಯನಿಷೇಧ ಹೋರಾಟವು ಇನ್ನೂ  ಪ್ರಕಾರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಸೇವಾ ಸಂಘವು ಮದ್ಯ ನಿಷೇಧ ಆಂದೋಲನ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದೊಂದಿಗೆ “ಮದ್ಯವ್ಯಸನ: ಒಂದು ಸಾಮಾಜಿಕ ಪಿಡುಗು” ಎಂಬ ಮಹಿಳಾಪ್ರಧಾನ ವಿಚಾರ ಸಂಕಿರಣವನ್ನು  ಫೆಬ್ರವರಿ 23 ಶನಿವಾರದಂದು ಬೆಳಗ್ಗೆ 10: 30 – ಮಧ್ಯಾಹ್ನ 2:0 ರವರೆಗೆ, ಬೆಂಗಳೂರಿನ ಕಸ್ತೂರ್ಬಾ   ಸಭಾಂಗಣ, ಗಾಂಧಿ ಭವನದಲ್ಲಿ ಆಯೋಜಿಸಿದೆ. ಈ ವಿಚಾರ ಸಂಕಿರಣದಲ್ಲಿ ನಾಡಿನ ಹೆಸರಾಂತ ಮಹಿಳೆಯರು, ಮದ್ಯ ನಿಷೇಧ ಆಂದೋಲನದ ಹೋರಾಟಗಾರ್ತಿಯರು ಭಾಗವಹಿಸಲಿದ್ದಾರೆ.

ಪಟ್ಟಣದ ಪ್ರಜ್ಞಾವಂತ ಜನರು ಗ್ರಾಮೀಣ ಮಹಿಳೆಯರು ಮುಂಚೂಣಿಯಲ್ಲಿರುವ ಈ ಮಹತ್ವಪೂರ್ಣ ಹೋರಾಟಕ್ಕೆ ಸಹಕಾರ ಕೊಟ್ಟು ಅದರೊಂದಿಗೆ ಕೈಜೋಡಿಸಬೇಕಾಗಿದೆ, ಆ ಮೂಲಕ ಪಟ್ಟಣದ ಮಹಿಳೆಯರು ಒಂದುಗೂಡಬೇಕಾಗಿದೆ.

ಬನ್ನಿ! ಮದ್ಯದ ಅನಿಷ್ಟವನ್ನು ತೊಲಗಿಸಲು ಈ ಹೋರಾಟಕ್ಕೆ ಕೈಜೋಡಿಸಿ!

ಗ್ರಾಮ ಸೇವಾ ಸಂಘ

ಮದ್ಯನಿಷೇಧ ಆಂದೋಲನ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ

ಸಂಪರ್ಕಿಸಿ : 9980043911 or 9008484880 | GramSevaSanghIndia@gmail.com